'ನಾವು ಭದ್ರಾವತಿಯ ಕಬ್ಬಿಣದಂತೆ, ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ..'; ಶಿವಮೊಗ್ಗದಲ್ಲಿ ಸಂಗಮೇಶ್ವರ್ ಆಕ್ರೋಶ

Sangameshwar
Published on

ಶಿವಮೊಗ್ಗ: 'ನಾವು ಭದ್ರಾವತಿಯ ಕಬ್ಬಿಣದಂತೆ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ..'

- ಹೀಗೆಂದು ಆಡಳಿತ ಪಕ್ಷ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇತ್ತೀಚೆಗೆಷ್ಟೇ ಸದನದಲ್ಲಿ ಅಂಗಿ ಬಿಚ್ಚಿ ವಿವಾದಕ್ಕೆ ಒಳಗಾಗಿರುವ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್​. ಶಿವಮೊಗ್ಗದಲ್ಲಿ ನಡೆಯುತ್ತಿರುವ ಜನಾಕ್ರೋಶ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ನನ್ನ ಮೇಲೆ, ನನ್ನ ಕುಟುಂಬ ಹಾಗೂ ನಮ್ಮ ಕಾರ್ಯಕರ್ತರ‌ ಮೇಲೆ ಸುಳ್ಳುಕೇಸು ಹಾಕಲಾಗಿದೆ. ಆ ಮೂಲಕ ನಮ್ಮನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯವರು ಯತ್ನಿಸಿದ್ದಾರೆ. ಆದರೆ ನಾವು ಭದ್ರಾವತಿಯ ಕಬ್ಬಿಣದಂತೆ, ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಸಂಗಮೇಶ್ವರ್ ಹೇಳಿದ್ದಾರೆ.

2011ರಲ್ಲಿ ನನ್ನನ್ನು ಬಿಜೆಪಿಗೆ ಕರೆದಿದ್ದರು, ಆದರೆ ನಾನು ಹೋಗಿರಲಿಲ್ಲ‌. ಆಗ ನಮ್ಮ ಮನೆಗೆ ಪೊಲೀಸರನ್ನು ಕಳುಹಿಸಿ ನಮ್ಮ ಮೇಲೆ ಹಲ್ಲೆ‌ ನಡೆಸಿ ಜೈಲಿಗೆ ಕಳುಹಿಸಿದ್ದರು‌. ಭದ್ರಾವತಿಯಲ್ಲಿ ಬಿಜೆಪಿಗೆ ನೆಲೆ ಇಲ್ಲ. ಹಾಗಾಗಿ ಕುತಂತ್ರದ ರಾಜಕಾರಣ ಮಾಡಿ ಭದ್ರಾವತಿಯಲ್ಲಿ ಗೆಲ್ಲಲು ಹೊರಟಿದ್ದಾರೆ, ಆದರೆ ಅದು ಅವರಿಂದ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಬಿಜೆಪಿಯವರು ಹೇಳಿದ್ದನ್ನು ಕೇಳಲೇಬೇಕಿದೆ. ಕತ್ತೆಗೆ ಎಂಟು ಕಾಲಿದೆ ಎಂದರೂ ಒಪ್ಪಬೇಕು, ಇಲ್ಲ ನಾಲ್ಕು ಕಾಲು ಎಂದರೆ ಕೇಸು ಹಾಕಿಸುತ್ತಾರೆ ಎಂದು ಲೇವಡಿ ಮಾಡಿದ ಸಂಗಮೇಶ್ವರ್, ಯಾವುದೇ ರಾಜಕಾರಣಿ ಧರ್ಮವನ್ನು ಒಡೆಯುವ ಕೆಲಸ ಮಾಡಬಾರದು. ನಾವೂ ಹಿಂದುಗಳೇ.. ನಾವೇನೂ ಪಾಕಿಸ್ತಾನದಿಂದ ಬಂದವರಲ್ಲ. ನನ್ನ ಹೆಸರು ಸಂಗಮೇಶ್ವರ್. ಶಿವನ ಹೆಸರನ್ನು ಇಟ್ಟುಕೊಂಡಿದ್ದೇನೆ. ನನಗೆ ಅನ್ಯಾಯ ಮಾಡಿದರೆ ಅವರೇ ಹಾಳಾಗುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net