ವೇವ್ ರೈಡರ್ ಬೋಯ್ ಕಳವು

boy theft
Published on

ಕಾರವಾರ: ತೀರದಿಂದ ಸುಮಾರು 8 ನಾಟಿಕಲ್ ಮೈಲ್ ದೂರದಲ್ಲಿ ಇನ್ಕೋಯಿಸ್ ಅಳವಡಿಸಿದ್ದ ವೇವ್ ರೈಡರ್ ಬೋಯ್ ವಾರದಿಂದ ನಾಪತ್ತೆಯಾಗಿದ್ದು, ಮೀನುಗಾರರಿಗೆ ಹವಾಮಾನ ಮಾಹಿತಿ ಸಿಗದಂತಾಗಿದೆ.
ಮೀನುಗಾರರಿಗೆ ಗಾಳಿಯ ವೇಗ, ಅಲೆಗಳ ಎತ್ತರ, ತೂಫಾನ್‌ಗಳು ಬರುವ ಬಗ್ಗೆ ಪೂರ್ವ ಮಾಹಿತಿ ನೀಡುವ ಸಲುವಾಗಿ ಹೈದ್ರಾಬಾದ್‌ನ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಕೇಂದ್ರವು ಇಲ್ಲಿನ ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಾಗರ ವಿಜ್ಞಾನ ವಿಭಾಗದಿಂದ ವೇವ್ ರೈಡರ್ ಬೋಯ್ ಅಳವಡಿಸಿತ್ತು.
2013 ರಿಂದಲೇ ಈ ಬೋಯ್ ಅಳವಡಿಸಲಾಗಿದ್ದರೂ ವರ್ಷದ ಹಿಂದೆ ಆಧುನಿಕ ತಂತ್ರಜ್ಞಾನದ ಹೊಸ ಬೋಯ್ ಅಳವಿಡಲಾಗಿತ್ತು.
ಸುಮಾರು 1 ಕೋಟಿ ರೂ.ಗೂ ಅಧಿಕ ಮೌಲ್ಯದ ಈ ಬೋಯ್ ಆಳ ಸಮುದ್ರದಲ್ಲಿ ಕಟ್ಟಿ ಇಡಲಾಗಿತ್ತು. ಅದು ಸಮುದ್ರ ವಾತಾವರಣದ ಮಾಹಿತಿಯನ್ನು ಸಂಗ್ರಹಿಸಿ ನಿರಂತರವಾಗಿ ಕೇಂದ್ರಕ್ಕೆ ರವಾನಿಸುತ್ತಿತ್ತು. ಇನ್ಕೋಯಿಸ್ ಕೇಂದ್ರ ಕಚೇರಿಯಿಂದ ಮೀನುಗಾರರ ಮೊಬೈಲ್‌ಗಳಿಗೆ ಪ್ರತಿ ದಿನ ಸಂದೇಶಗಳು ರವಾನೆಯಾಗುತ್ತಿದ್ದವು. ಕವಿವಿ ಅಧ್ಯಯನ ಕೇಂದ್ರ ಇದನ್ನು ನಿರ್ವಹಿಸುತ್ತಿತ್ತು.
ವಾರದ ಹಿಂದೆ ಇದ್ದಕ್ಕಿದ್ದಂತೆ ಬೋಯ್ ಸಂದೇಶ ನೀಡುವುದನ್ನು ನಿಲ್ಲಿಸಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ಬೋಯ್ ನಾಪತ್ತೆಯಾಗಿತ್ತು. ಬೋಯ್‌ಗೆ ಅಳವಡಿಸಿದ್ದ ಜಿಪಿಎಸ್ ನೋಡಿದಾಗ ಅದು ರತ್ನಾಗಿರಿವರೆಗೆ ಹೋಗಿದ್ದು ಕಂಡುಬಂದಿದೆ.
ಯಾರೋ ಉತದ್ದೇಶಪೂರ್ವಕವಾಗಿ ಅದನ್ನು ಕದ್ದೊಯ್ದ ಮಾಹಿತಿ ಇದ್ದು, ಈ ಬಗ್ಗೆ ನೌಕಾ ಸೇನೆಯ ಅಽಕಾರಿಗಳಿಗೆ, ಹಾಗೂ ಮೀನುಗಾರರಿಗೂ ಮಾಹಿತಿ ನೀಡಲಾಗಿದೆ. ಇದು ಬೇರೆ ಯಾರಿಗೂ ಯಾವುದೇ ಉಪಯೋಗಕ್ಕೆ ಬಾರದು ಎಂದು ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಜಗನ್ನಾಥ ರಾಠೋಡ ತಿಳಿಸಿದ್ದಾರೆ. ಬೋಯ್ ನಾಪತ್ತೆಯಾಗಿರು ಬಗ್ಗೆ ಸೋಮವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net