

ಮಾಗಡಿ: ತಾಲೂಕಿನಾದ್ಯಂತ ಧಾರಾಕಾರವಾಗಿ ಸುರಿದ ಭಾರಿ ಮಳೆಗೆ ಸಾಕಷ್ಟು ಕೆರೆ, ಕಟ್ಟೆಗಳು ಭರ್ತಿಯಾಗಿರುವ ಸಂತಸದ ನಡುವೆ ಬೆಳೆಗಳು ಜಲಾವೃತವಾಗಿ ರೈತರು ಸಂಕಷ್ಟ ಪಡುವಂತಾಗಿದೆ.
ತಾಲೂಕಿನ ಕೆಂಪಸಾಗರ, ನಾರಸಂದ್ರ, ಭರ್ಗಾವತಿ, ಕಲ್ಯಾ ಕೆರೆಗಳು ತುಂಬಿದರೆ, ವಿಶ್ವನಾಥಪುರ, ಜುಟ್ನಹಳ್ಳಿ, ಕಾಳೇರಿ, ಕೋಂಡಹಳ್ಳಿ ಕೆರೆಗಳು ಕೋಡಿ ಹರಿದಿವೆ. ಬಹುತೇಕ ಕಟ್ಟೆಗಳು, ಚೆಕ್ ಡ್ಯಾಂಗಳಲ್ಲೂ ನೀರು ತುಂಬಿದೆ.
ಕೆಂಪಸಾಗರ ಮುಂಭಾಗದ ಬ್ರಿಜ್ ಬಳಿ ಗಿಡ, ಗಂಟಿಗಳು ಬೆಳದು ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ರಸ್ತೆ ಮೇಲೆ ಹರಿದ ಪರಿಣಾಮ ರಸ್ತೆಯಲ್ಲಿ ನಾಗರಿಕರು ತಿರುಗಾಡದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಗಿಡ-ಗಂಟಿ ತೆರವುಗೊಳಿಸಿ ನೀರು ಹರಿಯುವಂತೆ ಮಾಡಿದರು.
ಹಲವೆಡೆ ವ್ಯತ್ಯಯ: ಕೆಂಪಸಾಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಳೆಯ ನೀರು ನುಗ್ಗಿದೆ. ಕೆಂಪಸಾಗರ, ಬೈರನಹಳ್ಳಿ ಗೇಟ್‌ನ ಸೇತುವೆ ಬಳಿಯ ರಾಗಿ, ತೆಂಗು, ಜೋಳ, ಅಡಕೆ, ಗೆಣಸು, ಮಾವು ಹಾಗೂ ಗುಡೇಪಾಳ್ಯದಲ್ಲಿ ರಾಗಿ ಬೆಳೆ ಸಂಪೂರ್ಣ ಜಲಾವೃತವಾಗಿದೆ.
ಮಾಗಡಿ ಪಟ್ಟಣದ ಹಲವೆಡೆಗಳ ತಗ್ಗುಪ್ರದೇಶಗಳ ಮನೆಗಳಿಗೆ ಮಳೆಯ ನೀರು ನುಗ್ಗಿ ಬಟ್ಟೆ, ದಿನಸಿ ಪದಾರ್ಥಗಳು ಹಾನಿಯಾಗಿವೆ. ತಾಲೂಕಿನ ಕುದೂರು, ತಿಪ್ಪಸಂದ್ರ, ಮಾಡಬಾಳ್, ತಗ್ಗಿಕುಪ್ಪೆ, ಹುಲಿಕಟ್ಟೆ ಗ್ರಾಮದ ಬಳಿ ಗಾಳಿ, ಮಳೆಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ಸಂಪರ್ಕ ಕಡಿತಗೊಂಡಿತ್ತು. ಬೆಸ್ಕಾಂ ಸಿಬ್ಬಂದಿ ಮರ ತೆರವುಗೊಳಿಸಿ ಸಂಪರ್ಕ ಸರಿಪಡಿಸಿದರು. ತಾಲೂಕಿನ ಬಹುತೇಕ ಕಡೆಗಳಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದರಿಂದ ಮಳೆ ನೀರು ಜಮೀನುಗಳಿಗೆ ನುಗ್ಗಿ ಕೆರೆಯಂತಾಗಿದೆ.
ಆಡಳಿತದ ನಿರ್ಲಕ್ಷ್ಯ
ರೈತರು, ನಾಗರಿಕರ ಅನುಕೂಲಕ್ಕಾಗಿ ತಾಲೂಕು ಆಡಳಿತ ಈವರೆಗೆ ಸಹಾಯವಾಣಿ ಆರಂಭಿಸಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಮಳೆ, ಗಾಳಿಯಿಂದ ಹಾನಿಯಾದ ಬೆಳೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ರೈತರು ಕರೆ ಮಾಡಿದರೆ ಬಹುತೇಕ ಅಧಿಕಾರಿಗಳು ಕರೆ ಸ್ವಿಕರಿಸುತ್ತಿಲ್ಲ ಎಂಬು ದೂರುಗಳು ವ್ಯಾಪಕವಾಗಿವೆ.
" ರಾಗಿ, ಭತ್ತ, ಜೋಳ, ತೊಗರಿ ಬೆ ಮಳೆಯಿಂದ ಜಲಾವೃತಗೊಂಡು ನಾಶವಾಗಿವೆ. ಈ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬೇಕು."
ಜುಟ್ನಹಳ್ಳಿ ಆರ್.ದಿನೇಶ್ ಕೆಂಪೇಗೌಡ ರೈತ ಸಂಘದ ರಾಜ್ಯಾ ಕಾರ್ಯಧ್ಯಕ್ಷ