ನೀರಿನ ಘಟಕ ಶುದ್ಧೀಕರಿಸಿ

dvd 4
ದೇವದುರ್ಗದ ಶಂಭುಲಿಂಗೇಶ್ವರ ಬೆಟ್ಟದ ಮೇಲಿರುವ ಜಲಶುದ್ಧೀಕರಣ ಘಟಕವನ್ನು ಸಹಾಯಕ ಆಯುಕ್ತ ರಜನಿಕಾಂತ್ ಚವ್ಹಾಣ್ ಭಾನುವಾರ ಪರಿಶೀಲಿಸಿದರು. ತಹಸೀಲ್ದಾರ್ ಕೆ.ವೈ.ಬಿದರಿ, ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸ್ ಚಾಪೆಲ್, ಪುರಸಭೆ ಮುಖ್ಯಾಧಿಕಾರಿ ದುರಗಪ್ಪ ಇದ್ದರು.
Published on

ದೇವದುರ್ಗ: ಪಟ್ಟಣದ ಎಲ್ಲ 23ವಾರ್ಡ್‌ಗಳಿಗೆ ಕುಡಿವ ನೀರು ಸರಬರಾಜು ಮಾಡುವ ಘಟಕವನ್ನು ಸ್ವಚ್ಛಗೊಳಿಸಿದ ನಂತರ ಜನರಿಗೆ ನೀರು ಪೂರೈಕೆ ಮಾಡುವಂತೆ ಪುರಸಭೆ ಅಧಿಕಾರಿಗಳಿಗೆ ಸಹಾಯಕ ಆಯುಕ್ತ ರಜನಿಕಾಂತ ಚವ್ಹಾಣ್ ಸೂಚಿಸಿದರು.

ಅಧಿಕಾರಿಗಳ ಸಭೆ

ಪಟ್ಟಣದ ಶಂಭುಲಿಂಗೇಶ್ವರ ಬೆಟ್ಟದ ಮೇಲಿರುವ ಜಲಶುದ್ಧೀಕರಣ ಘಟಕಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಕುಡಿಯಲು ಕಲುಷಿತ ನೀರು ಪೂರೈಕೆ ಮಾಡಿದ ಘಟನೆಗಳು ಪದೇ ಪದೆ ನಡೆಯುತ್ತಿವೆ. ಇಲ್ಲಿನ ಜಲಶುದ್ಧೀಕರಣ ಘಟಕ ತಾಲೂಕಿನಲ್ಲೇ ದೊಡ್ಡದಿದ್ದು, ಪಟ್ಟಣದ 23ನೇ ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಘಟಕದಲ್ಲಿ ನೀರು ಶುದ್ಧೀಕರಣವಾಗದೆ ಮಲಿನ ನೀರು ಪೂರೈಕೆಯಾಗುತ್ತಿದೆ ಎನ್ನುವ ದೂರುಗಳು ಕೇಳಿಬರುತ್ತಿವೆ ಎಂದರು.

ಪುರಸಭೆ ಮುಖ್ಯಾಧಿಕಾರಿ, ನೈರ್ಮಲ್ಯಾಧಿಕಾರಿ, ವಾಟರ್ ಸುಪರ್‌ವೈಸರ್ ಸ್ವತಃ ಮುಂದೆ ನಿಂತು ಘಟಕವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಕ್ರಮವಹಿಸಬೇಕು. ಬ್ಲೀಚಿಂಗ್ ಪೌಡರ್ ಸಮರ್ಪಕವಾಗಿ ಸಂಗ್ರಹಿಸಿಕೊಳ್ಳಬೇಕು. ನದಿಯಿಂದ ಬರುವ ನೀರು ಯಾವುದೇ ಕಾರಣಕ್ಕೆ ಹಾಗೆಯೇ ಮನೆಗೆ ಹರಿಸಬಾರದು.

ವಾರ್ಡ್‌ಗಳಲ್ಲಿ ಕುಡಿವ ನೀರಿನ ಪೈಪ್ ಒಡೆದಿರುವ ಬಗ್ಗೆ ಸಮೀಕ್ಷೆ ನಡೆಸಿ ತಕ್ಷಣದಿಂದಲೇ ದುರಸ್ತಿ ಮಾಡಿಸಬೇಕು. ಯಾವುದೇ ಕಾರಣಕ್ಕೂ ಚರಂಡಿ ಮೂಲಕ ಪೈಪ್ ಹಾಕಬಾರದು. ನೀರನ್ನು ವ್ಯರ್ಥ ಮಾಡದೆ ಸಮರ್ಪಕವಾಗಿ ಪೂರೈಕೆ ಮಾಡಬೇಕು. ಕೆಲವು ವಾರ್ಡ್‌ಗಳು, ಪಟ್ಟಣದಿಂದ ದೂರವಿರುವ ತಾಂಡಾ, ದೊಡ್ಡಿ, ಹಳ್ಳಿಗೂ ಇಲ್ಲಿಂದ ನೀರು ಪೂರೈಕೆಯಾಗುತ್ತಿದೆ. ಜನರಿಗೆ ಸಮಸ್ಯೆಯಾಗದಂತೆ ನೀರು ಕೊಡಬೇಕು. ನಿರ್ಲಕ್ಷ್ಯ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಎಚ್ಚರಿಕೆ ನೀಡಿದರು.

ತಹಸೀಲ್ದಾರ್ ಕೆ.ವೈ.ಬಿದರಿ, ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್, ಪುರಸಭೆ ಮುಖ್ಯಾಧಿಕಾರಿ ದುರಗಪ್ಪ, ನೀರು ಪೂರೈಕೆ ಘಟಕದ ಉಸ್ತುವಾರಿ ಅಧಿಕಾರ ರಂಗಪ್ಪ ಇತರರಿದ್ದರು.

ರೇಕಲಮರಡಿ ಗ್ರಾಮದಲ್ಲಿ ನಡೆದ ಕುಡಿವ ನೀರಿನ ದುರಂತ ಮತ್ತೆ ಎಲ್ಲಿಯೂ ಮರುಕಳಿಸದಂತೆ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಳ್ಳಲಿದೆ. ಕುಡಿವ ನೀರು ಪೂರೈಕೆ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿ ನೀರಿನ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು. ತಡವಾದರೂ ಪರವಾಗಿಲ್ಲ ಶುದ್ಧ ಕುಡಿವ ನೀರು ಪೂರೈಕೆ ಮಾಡಬೇಕು.ರಜಿನಿಕಾಂತ ಚವ್ಹಾಣ್ಸಹಾಯಕ ಆಯುಕ್ತ, ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net