

ಮಂಡ್ಯ: ರಾಜ್ಯದಲ್ಲಿಯೇ ಸಾಕಷ್ಟು ಸದ್ದು ಮಾಡಿದ್ದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್ಮುಲ್)ನಲ್ಲಿ ನಡೆದಿದ್ದ ಎನ್ನಲಾದ ಹಾಲಿಗೆ ನೀರು ಮಿಶ್ರಣ ಮಾಡಿ ಕೋಟ್ಯಂತರ ರೂ ವಂಚಿಸಿದ್ದ ಪ್ರಕರಣಕ್ಕೆ ಮರುಜೀವ ಪಡೆಯುವ ಮುನ್ಸೂಚನೆ ಸಿಕ್ಕಿದೆ. ಇದಕ್ಕೆ ಪೂರಕವೆಂಬಂತೆ ತನಿಖೆ ಬಗ್ಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸುಳಿವು ನೀಡಿದ್ದಾರೆ.
ಹಾಲಿಗೆ ನೀರು ಮಿಶ್ರಣ ಮಾಡಿ ಕೋಟ್ಯಂತರ ರೂ ಅವ್ಯವಹಾರ ಮಾಡಿದ್ದ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿ ಕಳೆದ ಬಿಜೆಪಿ ಸರ್ಕಾರ ಆದೇಶಿಸಿತ್ತು. ಆದರೆ ಅಲ್ಲಿಂದ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿಲ್ಲ. ಜತೆಗೆ ತಪ್ಪಿತಸ್ಥರ ವಿರುದ್ಧ ಕ್ರಮದ ಬಗ್ಗೆಯೂ ಸದ್ದಿರಲಿಲ್ಲ. ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಅಂತೆಯೇ ಮನ್ಮುಲ್ನಲ್ಲಿ ನಡೆದಿರುವ ಹಗರಣದ ಬಗ್ಗೆ ತನಿಖೆ ನಡೆಸುವುದಾಗಿ ವಿಧಾನಸಭಾ ಚುನಾವಣೆ ಮುನ್ನ ಜಿಲ್ಲಾ ಕಾಂಗ್ರೆಸ್ ೋಷಣೆ ಮಾಡಿತ್ತು. ಅದರಂತೆ ಇದೀಗ ತನಿಖೆ ಬಗ್ಗೆ ಗಮನಹರಿಸಲಾಗುತ್ತಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ಮನ್ಮುಲ್ನಲ್ಲಿ ಹಿಂದೆ ನಡೆದಿದೆ ಎನ್ನಲಾದ 72 ಕೋಟಿ ರೂ ಹಾಗೂ ಹಾಲು-ನೀರು ಮಿಶ್ರಣ ಹಗರಣಕ್ಕೆ ಸಂಬಂಧಿಸಿದಂತೆ ಖಂಡಿತವಾಗಿಯೂ ನಮ್ಮ ಸರ್ಕಾರ ತನಿಖೆ ಮಾಡಿಸಲಿದೆ. ನಾವೇ ಈ ಹಿಂದೆ ತನಿಖೆಗೆ ಒತ್ತಾಯಿಸಿದ್ದೆವು. ಸಿದ್ದರಾಮಯ್ಯ ಸಹ ಹಿಂದೆ ಅಸೆಂಬ್ಲಿಯಲ್ಲಿ ಪ್ರಸ್ತಾಪ ಮಾಡಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದು, ಮೊನ್ನೆ ಕೂಡ ಅವರ ಮುಂದೆ ಪ್ರಸ್ತಾಪ ಮಾಡಿದ್ದೇನೆ. ಈಗಿನ ಮನ್ಮುಲ್ ನಿರ್ದೇಶಕರು ಕೂಡ ತನಿಖೆಗೆ ಸಹಕರಿಸುತ್ತೇವೆ ಎಂದಿದ್ದಾರೆ. ಆದ್ದರಿಂದ ತನಿಖೆ ಮಾಡಲು ತೊಂದರೆ ಇಲ್ಲ. ಅದರಂತೆ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳೋಣಾ. ಜಿಲ್ಲೆಯ ಎಲ್ಲ ಶಾಸಕರು ಹಾಗೂ ಸಿಎಂ ಜತೆ ಚರ್ಚೆ ಮಾಡಿ ಸಿಬಿಐ ವಹಿಸಬೇಕಾ, ಬೇಡ್ವಾ ಎಂದು ತೀರ್ಮಾನ ಮಾಡುತ್ತೇವೆ ಎಂದರು.
ಗ್ಯಾರಂಟಿ ಯೋಜನೆ ಬಗ್ಗೆ ಬಿಜೆಪಿ ಹಾಗೂ ಸಂಸದ ಪ್ರತಾಪ್ಸಿಂಹ ಟೀಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ತುಂಬಾ ಹತಾಶರಾಗಿದ್ದಾರೆ. ಗ್ಯಾರಂಟಿ ಯೋಜನೆ ಜಾರಿಗೆ ತರುವುದಿಲ್ಲವೇನೋ ಎಂಬ ಆತಂಕ ಅವರಿಗೆ ಇತ್ತು. ಯೋಜನೆ ಘೋಷಣೆ ಬಳಿಕ ಏನು ಹೇಳುವುದಕ್ಕೆ ಸಾಧ್ಯ. ಬಿಜೆಪಿಗರಿಗೆ ಕಾಲವೇ ಉತ್ತರಕೊಡುತ್ತದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರವನ್ನ ಸುಭದ್ರವಾಗಿ ಮಾಡುತ್ತೇವೆ. ಕಾಲಕ್ರಮೇಣ ಅವರಿಗೂ ಗೊತ್ತಾಗುತ್ತದೆ ಎಂದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಕಾಂಗ್ರೆಸ್ ಸರ್ಕಾರದ ಸಿದ್ದರಾಮಯ್ಯ ಅವರೇ ಹೊರತು ಬಿಜೆಪಿ, ಜನತಾದಳದವರಲ್ಲ ಎಂದು ಸುಭಿಕ್ಷ ರಾಜ್ಯ ಭಿಕ್ಷ ರಾಜ್ಯವಾಗುತ್ತೆ ಎಂದಿದ್ದ ಪ್ರತಾಪ್ಸಿಂಹಗೆ ತಿರುಗೇಟು ನೀಡಿದರು.