

ನಂಜನಗೂಡು: ತಾಲೂಕಿನ ಹೆಡತಲೆ ಗ್ರಾಮದಲ್ಲಿ ಗುರುವಾರ ಕೋಳಿಗಳನ್ನು ತುಂಬಿಕೊಂಡು ಬರುತ್ತಿದ್ದ ಬೊಲೆರೋ ಪಿಕಪ್ ವಾಹನ ಶುದ್ಧ ನೀರಿನ ಘಟಕಕ್ಕೆ ಡಿಕ್ಕಿಯೊಡೆದ ಪರಿಣಾಮ ಘಟಕ ಜಖಂಗೊಂಡಿದೆ.
ನಂಜನಗೂಡು ಸಮೀಪದ ಕೋಳಿ ಫಾರ್ಮ್ ಒಂದರಿಂದ ಸುತ್ತಮುತ್ತಲಿನ ಗ್ರಾಮಗಳ ಅಂಗಡಿಗಳಿಗೆ ಕೋಳಿಗಳನ್ನು ಸರಬರಾಜು ಮಾಡುತ್ತಿದ್ದ ವಾಹನವು ಹೆಡತಲೆಗೆ ಬರುವಾಗ ಇಲ್ಲಿನ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ನಿರ್ಮಾಣ ಮಾಡಿದ್ದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಘಟಕ ಜಖಂಗೊಂಡು ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅದೃಷ್ಟವಶಾತ್ ಸ್ಥಳದಲ್ಲಿ ಜನರ‌್ಯಾರು ಇಲ್ಲದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ದೊಡ್ಡ ಕವಲಂದೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.