ಟ್ಯಾಂಕರ್​ಗಳಿಗೆ ಮೂಗುದಾರ; ದರ ಫಿಕ್ಸ್​ ಮಾಡಿದ ಜಿಲ್ಲಾಡಳಿತ

Water Tankers
Published on

ಬೆಂಗಳೂರು: ರಾಜಧಾನಿಯ ಜಲಕ್ಷಾಮವನ್ನೇ ಬಂಡವಾಳ ಮಾಡಿಕೊಂಡು ಸುಲಿಗೆಗಿಳಿದಿದ್ದ ಖಾಸಗಿ ನೀರು ಪೂರೈಕೆ ಟ್ಯಾಂಕರ್​ಗಳಿಗೆ ಬೆಂಗಳೂರು ಜಿಲ್ಲಾಡಳಿತ ಮೂಗುದಾರ ಹಾಕಿದೆ. ಬೇಕಾಬಿಟ್ಟಿ ದರ ವಿಧಿಸುವುದನ್ನು ತಪ್ಪಿಸುವುದಕ್ಕಾಗಿಯೇ ಪ್ರತ್ಯೇಕ ದರಪಟ್ಟಿ ನಿಗದಿಪಡಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಗುರುವಾರ ಆದೇಶ ಹೊರಡಿಸಿದ್ದಾರೆ.

ಇದರನ್ವಯ ಇನ್ಮುಂದೆ ಐದು ಕಿ.ಮೀ. ವ್ಯಾಪ್ತಿ ಯೊಳಗೆ ನೀರು ಸರ ಬರಾಜು ಮಾಡುವ 6 ಸಾವಿರ ಲೀ. ಸಾಮರ್ಥ್ಯದ ವಾಟರ್ ಟ್ಯಾಂಕರ್​ಗೆ 600 ರೂ., 8 ಸಾವಿರ ಲೀ. ಸಾಮರ್ಥ್ಯದ ವಾಟರ್ ಟ್ಯಾಂಕರ್​ಗೆ 700 ರೂ. ಹಾಗೂ 12 ಸಾವಿರ ಲೀ. ಸಾಮರ್ಥ್ಯದ ವಾಟರ್ ಟ್ಯಾಂಕರ್​ಗೆ ಒಂದು ಸಾವಿರ ರೂ. ನಿಗದಿಪಡಿಸಲಾಗಿದೆ.

5 ಕಿ.ಮೀ.ನಿಂದ 10 ಕಿ.ಮೀ.ವರೆಗಿನ ದೂರಕ್ಕೆ 6 ಸಾವಿರ ಲೀ. ನೀರಿಗೆ 750 ರೂ., 8 ಸಾವಿರ ಲೀ.ಗೆ 850 ರೂ. ಹಾಗೂ 12 ಸಾವಿರ ಲೀ. ನೀರಿಗೆ 1,200 ರೂ. ನಿಗದಿಗೊಳಿಸಲಾಗಿದೆ. ಈ ದರಪಟ್ಟಿಯಲ್ಲಿ ಜಿಎಸ್​ಟಿ ಶುಲ್ಕ ಸೇರಿಸಲಾಗಿದೆ. ಯಾವುದೇ ಕಾರಣಕ್ಕೂ ಪ್ರತ್ಯೇಕವಾಗಿ ಜನರು ಜಿಎಸ್​ಟಿ ಪಾವತಿಸುವಂತಿಲ್ಲ ಎಂಬುದನ್ನೂ ಸ್ಪಷ್ಟಪಡಿಸಲಾಗಿದೆ.

ratecard

ಒಂದು ತಿಂಗಳವರೆಗೆ ಪ್ರತಿನಿತ್ಯ ಸರಬರಾಜು ಮಾಡುವ ವಾಟರ್ ಟ್ಯಾಂಕರ್​ಗೆ 510 ರೂ. ಹಾಗೂ 5 ಕಿ.ಮೀ.ನಿಂದ 10 ಕಿ.ಮೀ.ವರೆಗೆ ನೀರು ಸರಬರಾಜು ಮಾಡುವ ಟ್ಯಾಂಕರ್​ಗೆ 650 ರೂ. ನಿಗದಿಪಡಿಸಲಾಗಿದೆ. 8 ಸಾವಿರ ಲೀ.ನಿಂದ 12 ಸಾವಿರ ಲೀ. ವರೆಗಿನ ಪ್ರತಿ ಕಿಲೋ ಲೀಟರ್​ಗೆ 50 ರೂ. ಪಾವತಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿ ಸಮರ್ಥನೆ: ಬೆಂಗಳೂರು ನಗರದ ಜಿಲ್ಲೆಯ ಎಲ್ಲ ತಾಲೂಕುಗಳು ಬರಪೀಡಿತವೆಂದು ಘೋಷಿಸಲಾಗಿದ್ದು, ನಗರಕ್ಕೆ 4 ತಿಂಗಳ ಅವಧಿಗೆ ಕುಡಿಯುವ ನೀರು ಸರಬರಾಜು ಮಾಡಲು 200 ಖಾಸಗಿ ನೀರಿನ ಟ್ಯಾಂಕರ್​ಗಳನ್ನು ಜಲಮಂಡಳಿಗೆ ನೀಡಲು ಮತ್ತು ದರಪಟ್ಟಿ ನಿಗದಿಪಡಿಸಲು ಕೋರಿದ್ದರು. ಸಾರ್ವಜನಿಕರ ಹಿತದೃಷ್ಟಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಖಾಸಗಿ ವಾಟರ್ ಟ್ಯಾಂಕರ್​ಗಳ ದರವನ್ನು ತಾಂತ್ರಿಕ ಸಮಿತಿಯ ವರದಿಯಂತೆ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

helpline

ಬೆಂಗಳೂರು ನಗರ ಜಿಲ್ಲೆಯ ಎಲ್ಲ ಐದು ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು (ಪಿಡಿಒ) ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು.

| ಕೆ.ಎ. ದಯಾನಂದ ಬೆಂಗಳೂರು ನಗರ ಡಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net