

ಹಾವೇರಿ: ದಿನದಿಂದ ದಿನಕ್ಕೆ ಬಿಸಿಲ ಬೇಗೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಜನವಸತಿ ಪ್ರದೇಶಗಳಲ್ಲಿ ಇನ್ನೂ ನೀರಿನ ಗಂಭೀರ ಸಮಸ್ಯೆ ಕಂಡುಬಂದಿಲ್ಲ. ಆದರೆ, ಅರಣ್ಯ ಪ್ರದೇಶಗಳಲ್ಲಿದ್ದ ಜಲಮೂಲಗಳೆಲ್ಲ ಬತ್ತಿ ಹೋಗಿವೆ. ಹೀಗಾಗಿ ಅರಣ್ಯದಲ್ಲಿನ ಪ್ರಾಣಿಗಳಿಗೆ ಕುಡಿಯುವ ನೀರಿಗಾಗಿ ಅರಣ್ಯ ಇಲಾಖೆಯಿಂದ ನೀರಿನ ತೊಟ್ಟಿ ನಿರ್ವಿುಸಿ ನೀರು ತುಂಬಿಸುವ ಕಾರ್ಯ ಆರಂಭಿಸಲಾಗಿದೆ.
ಹಾವೇರಿ ತಾಲೂಕಿನ ಗುತ್ತಲ, ನೆಗಳೂರ, ಕಾಟೇನಹಳ್ಳಿ, ಕರ್ಜಗಿ, ಗಣಜೂರ ಭಾಗದಲ್ಲಿ ಅರಣ್ಯ ಪ್ರದೇಶ ವ್ಯಾಪ್ತಿಸಿದೆ. ಈ ಭಾಗದಲ್ಲಿ 2,500ದಿಂದ 3 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ತೊಟ್ಟಿಗಳನ್ನು ಹಾವೇರಿ ಅರಣ್ಯ ವಲಯದಿಂದ ನಿರ್ವಿುಸಿದ್ದು, ಅವುಗಳಿಗೆ ಪ್ರತಿ ವಾರಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ.
ಅರಣ್ಯ ಇಲಾಖೆ ನೀರಿನ ತೊಟ್ಟಿಗಳನ್ನು ನಿರ್ವಿುಸಿ ಟ್ಯಾಂಕರ್ಗಳ ಮೂಲಕ ಅವುಗಳಿಗೆ ನೀರು ತುಂಬಿಸುತ್ತಿರುವುದರಿಂದ ಅರಣ್ಯದಲ್ಲಿರುವ ಪ್ರಾಣಿ, ಪಕ್ಷಿಗಳ ಬಾಯಾರಿಕೆ ನೀಗುತ್ತಿದೆ. ಇದರಿಂದ ನೀರನ್ನರಸಿ ಕೃಷ್ಣಮೃಗ, ಮೊಲ, ತೋಳ, ನರಿ, ಕಾಡುಹಂದಿ, ನವಿಲು, ಗಿಳಿ ಸೇರಿ ವಿವಿಧ ಪ್ರಾಣಿಗಳು ಹಾಗೂ ಪಕ್ಷಿಗಳು ಜನವಸತಿ ಪ್ರದೇಶಗಳಿಗೆ ಬರುವುದು ತಪ್ಪಿದೆ. ನೀರನ್ನರಸಿ ಜನವಸತಿ ಪ್ರದೇಶಕ್ಕೆ ಪ್ರಾಣಿಗಳು ಬಂದಾಗ ಅವುಗಳಿಗೆ ಪ್ರಾಣಾಪಾಯವೇ ಹೆಚ್ಚು. ಅರಣ್ಯದಲ್ಲಿಯೇ ನೀರಿನ ತೊಟ್ಟಿಗಳ ನಿರ್ವಣದಿಂದ ಮನುಷ್ಯರಿಂದ ವನ್ಯಜೀವಿಗಳ ಪ್ರಾಣಕ್ಕೆ ಒದಗುತ್ತಿದ್ದ ಕುತ್ತು ತಪ್ಪಿದಂತಾಗಿದೆ.
ಸದ್ಯ ನದಿಗಳಲ್ಲಿ ನೀರು ಸಂಪೂರ್ಣವಾಗಿ ಬರಿದಾಗದೇ ಇರುವುದರಿಂದ ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆ ಉಲ್ಬಣಿಸಿಲ್ಲ. ಅರಣ್ಯ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ನಿರ್ವಣವಾಗಿದ್ದ ಬದು, ಕೆರೆಗಳಲ್ಲಿ ನೀರಿನ ಮೂಲಗಳು ಬರಿದಾಗಿವೆ. ಕೃತಕ ನೀರಿನ ತೊಟ್ಟಿಗಳಿಂದ ವನ್ಯಪ್ರಾಣಿಗಳು ನೀರನ್ನರಸಿ ಅರಣ್ಯದಿಂದ ಹೊರಬರದಂತೆ ತಡೆಯುವಂತಾಗಿದೆ.
ತಾಲೂಕಿನಲ್ಲಿ ಹೆಚ್ಚಾಗಿ ಅರಣ್ಯ ಪ್ರದೇಶವಿರುವ ಗುತ್ತಲ, ನೆಗಳೂರ, ಕಾಟೇನಹಳ್ಳಿ, ಗಣಜೂರ, ಕರ್ಜಗಿ ಭಾಗದಲ್ಲಿ ಒಟ್ಟು 5 ನೀರಿನ ತೊಟ್ಟಿಗಳನ್ನು ನಿರ್ವಿುಸಲಾಗಿದೆ.
ಅರಣ್ಯದಲ್ಲಿರುವ ವನ್ಯಜೀವಿಗಳು ಬೇಸಿಗೆ ಸಮಯದಲ್ಲಿ ನೀರನ್ನರಸಿ ಜನವಸತಿ ಪ್ರದೇಶದಲ್ಲಿನ ಕೆರೆ, ಬಾವಿಗಳನ್ನು ಅರಸುತ್ತ ಬರುತ್ತವೆ. ಈ ಸಮಯದಲ್ಲಿ ರಸ್ತೆಯಲ್ಲಿ ಅಪಘಾತಕ್ಕೆ ಸಿಲುಕುವ, ಜನವಸತಿ ಪ್ರದೇಶದಲ್ಲಿ ಜನ, ಜಾನುವಾರುಗಳಿಂದ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಅರಣ್ಯದಲ್ಲಿಯೇ ಇಲಾಖೆಯಿಂದ ನೀರಿನ ತೊಟ್ಟಿಗಳನ್ನು ನಿರ್ವಿುಸಿ ಪ್ರತಿವಾರ ನೀರು ಹಾಕಲಾಗುತ್ತಿದೆ. ಈ ವರ್ಷ ಹೊಸದಾಗಿ 3 ತೊಟ್ಟಿಗಳನ್ನು ನಿರ್ವಿುಸಲಾಗಿದೆ.| ಎನ್.ಕೆ. ಉಮರಬಾಷಾ, ಆರ್ಎಫ್ಒ ಪ್ರಾದೇಶಿಕ ವಲಯ ಅರಣ್ಯ ಹಾವೇರಿ