

* ಪ್ರವಾಸೋದ್ಯಮ ದಿನವಾದ 27ಕ್ಕೆ ಚಾಲನೆ
* ಇನ್ನೂ ಮೂರು ಕೆರೆಗಳು ಆಯ್ಕೆ
ಗಂಗಾಧರ್ ಬೈರಾಪಟ್ಟಣ ರಾಮನಗರ
ಕಳೆದ ಹಲವಾರು ವರ್ಷಗಳಿಂದಲೂ ಜಿಲ್ಲೆಯ ಜಲ ಸಂಪತ್ತನ್ನು ಬಳಕೆ ಮಾಡಿಕೊಂಡು ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಬೇಕು ಎನ್ನುವ ಪ್ರಯತ್ನ ಈಗ ಕಾರ್ಯ ರೂಪಕ್ಕೆ ಬಂದಿದ್ದು, ಸೆ.27ರಿಂದ ಜಿಲ್ಲೆಯ ನಾಲ್ಕು ಕೆರೆಗಳಲ್ಲಿ ಜಲ ಕ್ರೀಡೆಗಳು ಆರಂಭಗೊಳ್ಳಲಿವೆ.
ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿಯೇ ಇರುವ ರಾಮನಗರ ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೇಳಿ ಮಾಡಿಸಿದಂತಿದೆ. ಬೃಹತ್ ಬೆಟ್ಟಗುಡ್ಡಗಳು ಚಾರಣಕ್ಕೆ ಅವಕಾಶವನ್ನು ಹೊಂದಿದ್ದರೆ ಮತ್ತೊಂದೆಡೆ ಇರುವ ಜಲಾಶಯಗಳು ಜಲ ಕ್ರೀಡೆಗಳ ಮೂಲಕ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಇವುಗಳನ್ನು ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಕಳೆದ ಹಲವಾರು ವರ್ಷಗಳಿಂದಲೂ ಪ್ರಯತ್ನಗಳು ನಡೆಯುತ್ತಲೇ ಇದ್ದವು. ಆದರೆ ಈಗ ಕಾಲ ಕೂಡಿಬಂದಿದೆ.
ಜಿಲ್ಲೆಯ ಬೃಹತ್ ಕೆರೆಗಳಲ್ಲಿಯೂ ಸಹ ಜಲ ಕ್ರೀಡೆಗಳನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದರ ಮೊದಲ ಭಾಗವಾಗಿ ರಾಮನಗರ ರಂಗರಾಯರದೊಡ್ಡಿ, ಬಿಡದಿಯ ನಲ್ಲಿಗುಡ್ಡೆ ಕೆರೆ, ಹಾರೋಹಳ್ಳಿಯ ರಾವುತ್ತನಹಳ್ಳಿ ಕೆರೆ, ಮಾಗಡಿಯ ವೈ.ಜಿ.ಗುಡ್ಡ ಕೆರೆಯಲ್ಲಿ ಜಲ ಕ್ರೀಡೆಗಳನ್ನು ನಡೆಸಲು ಟೆಂಡರ್ ಪ್ರಕ್ರಿಯೆಯನ್ನು ಪ್ರವಾಸೋದ್ಯಮ ಇಲಾಖೆ ಪೂರ್ಣಗೊಳಿಸಿ, ಎಸ್ಕೇಪ್-2 ಎಕ್ಸ್‌ಪ್ಲೋರ್ ಎನ್ನುವ ಸಂಸ್ಥೆಗೆ ಗುತ್ತಿಗೆ ನೀಡಿದೆ. ಇದರಲ್ಲಿ ಸೆ.27ರ ಶನಿವಾರದಿಂದ ರಾಮನಗರದ ರಂಗರಾಯರದೊಡ್ಡಿ ಕೆರೆಯಲ್ಲಿ ಜಲ ಕ್ರೀಡೆಗಳು ಆರಂಭಗೊಳ್ಳಲಿವೆ. ಇದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಹಲವು ಗಣ್ಯರು ಚಾಲನೆ ನೀಡುವ ಸಾಧ್ಯತೆ ಇದೆ. ನಂತರ ಉಳಿದ ಮೂರು ಕೆರೆಗಳಲ್ಲಿ ಹಂತ ಹಂತವಾಗಿ ಜಲ ಕ್ರೀಡೆಗಳು ಶುರುವಾಗಲಿವೆ.
ಸದ್ಯಕ್ಕೆ ಕಯಾಕಿಂಗ್, ಪೆಡಲ್ ಬೋಟಿಂಗ್, ವಾಟರ್ ಬೈಕ್, ಬನಾನಾ ಬೋಟ್‌ಗಳು ಲಭ್ಯವಾಗಲಿದೆ.
ಆದರೆ ಭವಿಷ್ಯದಲ್ಲಿ ಇದನ್ನು ಮತ್ತಷ್ಟು ವಿಸ್ತರಿಸುವ ಇರಾದೆ ಹೊಂದಿರುವ ಪ್ರವಾಸೋದ್ಯಮ ಇಲಾಖೆ ತೇಲುವ ರೆಸ್ಟೋರೆಂಟ್( ಫ್ಲೋಟಿಂಗ್ ರೆಸ್ಟೋರೆಂಟ್), ಬೋಟ್ ಹೌಸ್‌ನಂತಹ ವಿಭಿನ್ನ ಸೇವೆಗಳನ್ನು ಒದಗಿಸಲು ಚಿಂತಿಸಿದೆ. ಮುಂದಿನ ದಿನಗಳಲ್ಲಿ ಜಲ ಕ್ರೀಡೆಗಳನ್ನು ಸಾಹಸಾತ್ಮಕಗೊಳಿಸುವ ನಿಟ್ಟಿನಲ್ಲಿಯೂ ವಿಭಿನ್ನ ಕ್ರೀಡೆಗಳನ್ನು ಪರಿಚಯಿಸಲು ಈಗಾಗಲೇ ಗುತ್ತಿಗೆ ಪಡೆದ ಸಂಸ್ಥೆಗೆ ಇಲಾಖೆ ಸೂಚಿಸಿದೆ.
ಬೆಂಗಳೂರು-ಮೈಸೂರು ಹೆದ್ದಾರಿಗೆ ಸಂಪರ್ಕ ಹೊಂದಿರುವ ಕಣ್ವ ಜಲಾಶಯದಲ್ಲಿ ಮುರಡೇಶ್ವರ ಮೂಲದ ಸಂಸ್ಥೆಯೊಂದು ಬೋಟಿಂಗ್ ನಡೆಸಲು 15 ವರ್ಷಗಳಿಗೆ ಟೆಂಡರ್ ಪಡೆದುಕೊಂಡಿದೆ. ಸದ್ಯಕ್ಕೆ ವಿವಿಧ ಇಲಾಖೆಗಳ ನಿರಾಕ್ಷೇಪಣಾ ಪತ್ರಗಳು ಮಾತ್ರ ಬೇಕಿದ್ದು, ಇದು ಲಭ್ಯವಾಗುತ್ತಿದ್ದಂತೆ ಇಲ್ಲಿಯೂ ಇತರ ಜಲ ಕ್ರೀಡಾ ಚಟುವಟಿಕೆಗಳು ಆರಂಭಗೊಳ್ಳಲಿವೆ.
ರಂಗರಾಯರದೊಡ್ಡಿ ಕೆರೆಯಲ್ಲಿ ಆರಂಭಗೊಳ್ಳುವ ಜಲ ಕ್ರೀಡೆಗಳಿಗೆ ಹೆಚ್ಚಿನ ದರ ನಿಗದಿ ಮಾಡದಿರಲು ಇಲಾಖೆ ಹಾಗೂ ಜನಪ್ರತಿನಿಧಿಗಳು ಗುತ್ತಿಗೆ ಪಡೆದ ಸಂಸ್ಥೆಗೆ ಸೂಚಿಸಿದ್ದಾರೆ. ಎಲ್ಲ ವರ್ಗದ ಜನರೂ ಜಲ ಕ್ರೀಡೆಯನ್ನು ಆನಂದಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಸೂಚನೆ ನೀಡಲಾಗಿದೆ. ಇದರ ಜತೆಗೆ ಶಾಲಾ ಮಕ್ಕಳಿಗೆ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡಲು ನಿರ್ದೇಶನ ನೀಡಲಾಗಿದೆ.
ಬೇಕಿದೆ ಸರ್ಕಾರದ ನೆರವು
ರಾಮನಗರ ಜಿಲ್ಲೆ ಪ್ರವಾಸೋದ್ಯಮಕ್ಕೆ ತನ್ನನ್ನು ತೆರೆದುಕೊಂಡಿದೆ. ಆದರೆ ಇದಕ್ಕೆ ಬೇಕಾದ ರೂಪು ರೇಷೆಗಳನ್ನು ನೀಡಿ, ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬೇಕು. ಜಿಲ್ಲೆಯ ಧಾರ್ಮಿಕ, ಪ್ರವಾಸಿ ತಾಣಗಳ ಭೇಟಿ, ಟ್ರೆಕ್ಕಿಂಗ್ ಸೇರಿ ಸಮಗ್ರವಾದ ಪ್ರವಾಸೋದ್ಯಮ ಯೋಜನೆಯನ್ನು ಜಾರಿಗೆ ತಂದರೆ ಇಲ್ಲಿಯೇ ಸಾಕಷ್ಟು ಉದ್ಯೋಗ ಸೃಷ್ಟಿ ಆಗಲಿವೆ. ಈ ಹಿಂದೆ ಟೂರಿಸಂ ಸರ್ಕೀಟ್ ಮಾಡುವ ಯೋಜನೆ ರೂಪಿಸಲಾಗಿತ್ತಾದರೂ ಇದು ಜಾರಿಗೆ ಬರಲಿಲ್ಲ. ಆದರೆ ಪ್ರವಾಸೋದ್ಯಮಕ್ಕೆ ಹೆಚ್ಚು ಉತ್ತೇಜನ ನೀಡಿದರೆ ಜಿಲ್ಲೆಯ ಅಭಿವೃದ್ಧಿಗೂ ಸಹಕಾರಿ ಆಗಲಿದೆ.