ಕಾಳಿ ನದಿಯಲ್ಲಿ ಜಲ ಸಾಹಸ ಕ್ರೀಡಾ ತರಬೇತಿ ಪ್ರಾರಂಭ

Water sports
Published on

ಕಾರವಾರ: ಇಲ್ಲಿನ ಕಾಳಿ ನದಿಯಲ್ಲಿ ರಾಜ್ಯ ಮಟ್ಟದ ಜಲಸಾಹಸ ತರಬೇತಿ ಶಿಬಿರ ಆರಂಭಗೊಂಡಿದೆ. ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ (ಜೆತ್ನಾ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯದ ವಿವಿಧ ಜಿಲ್ಲೆಗಳ ಎಸ್‌ಸಿ, ಎಸ್‌ಟಿ ಯುವಕ, ಯುವತಿಯರಿಗಾಗಿ ಜಲ ಸಾಹಸ ತರಬೇತಿ ಬೇಸಿಕ್ ಶಿಬಿರವನ್ನು ಆಯೋಜಿಸಲಾಗಿದೆ.
ಚಿಕ್ಕಬಳ್ಳಾಪುರ, ಬೆಂಗಳೂರು, ಕೋಲಾರ ಹಾಗೂ ಸ್ಥಳೀಯರು ಸೇರಿ 30 ಅಭ್ಯರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದು, 10 ದಿನಗಳ ಈ ತರಬೇತಿಯಲ್ಲಿ ಈಜು, ನೀರಿನಲ್ಲಿ ಬಿದ್ದವರ ರಕ್ಷಣೆ, ಕಯಾಕಿಂಗ್, ರ‍್ಯಾಫ್ಟಿಂಗ್ ಮುಂತಾದ ಜಲ ಸಾಹಸ ಕೌಶಲಗಳನ್ನು ಉಚಿತ ಊಟ, ವಸತಿಯೊಂದಿಗೆ ನೀಡಲಾಗುತ್ತಿದೆ. ನ.18 ರಿಂದ 2 ನೇ ಬ್ಯಾಚ್‌ನ ಶಿಬಿರ ಪ್ರಾರಂಭವಾಗಲಿದೆ.

ಕಟ್ಟಡ ಬಳಕೆ:
ಕಾಳಿ ನದಿಯಲ್ಲಿ ಸದಾಶಿವಗಡದಲ್ಲಿ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲಾಗಿತ್ತು. ಆದರೆ, ಅದು ಸಮರ್ಪಕವಾಗಿ ಬಳಕೆಯಾಗದ ಹಿನ್ನೆಲೆಯಲ್ಲಿ ಹಾಸ್ಟೆಲ್‌ನ್ನು ಜಂಗಲ್ ರೆಸಾರ್ಟ್ಗೆ ಹಸ್ತಾಂತರಿಸಲಾಗಿತ್ತು. ಈ ವರ್ಷ ಅದನ್ನು ವಾಪಸ್ ಪಡೆಯಲಾಗಿತ್ತು. ಆದರೆ, ಕಟ್ಟಡ ಬಳಕೆಯಿಲ್ಲದೇ ಪಾಳು ಬಿದ್ದಿತ್ತು. ಈ ಕುರಿತು `ವಿಜಯವಾಣಿ' ವರದಿ ಪ್ರಕಟಿಸಿತ್ತು. ಈಗ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ತನ್ನ ಚಟುವಟಿಕೆ ಮರು ಪ್ರಾರಂಭ ಮಾಡಿರುವುದರಿಂದ ಕಟ್ಟಡ ಬಳಕೆಗೆ ಬಂದಿದೆ.

2015 ರ ನಂತರ ಕಾರವಾರದಲ್ಲಿ ಜೆತ್ನಾದ ರಾಜ್ಯಮಟ್ಟದ ಯಾವುದೇ ಜಲಸಾಹಸ ತರಬೇತಿ ಶಿಬಿರಗಳು ನಡೆದಿರಲಿಲ್ಲ. ಈಗ ಶಿಬಿರಗಳು ಪ್ರಾರಂಭವಾಗಿದ್ದು, ನಿರಂತರ ತರಬೇತಿ ಕೈಗೊಳ್ಳಲು ಕ್ರಮ ವಹಿಸಲಾಗುವುದು. ಪ್ರಸ್ತುತ 10 ದಿನಗಳ ಕ್ಯಾಂಪ್‌ನಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ಮುಂದೆ 7 ದಿನದ ಅಡ್ವಾನ್ಸ್ ಶಿಬಿರದಲ್ಲಿ ತರಬೇತಿ ಪಡೆದು, ಪ್ರಮಾಣಪತ್ರ ಪಡೆದುಕೊಳ್ಳುವ ಅವಕಾಶವಿದೆ. ಅಭ್ಯರ್ಥಿಗಳು ಉದ್ಯೋಗ ಗಿಟ್ಟಿಸಿಕೊಳ್ಳಲು ಪ್ರಮಾಣಪತ್ರ ಅನುಕೂಲವಾಗಲಿದೆ.ಪ್ರಕಾಶ ಹರಿಕಂತ್ರಜೆತ್ನಾ ಇನ್ಸ್ ಸ್ಟ್ರಕ್ಟರ್‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net