ಮುಂಗಾರು ಹಂಗಾಮಿಗೆ ನೀರು ಖಚಿತ

19-pnp 1b
Published on

ಪಾಂಡವಪುರ: ರೈತರ ಬೇಡಿಕೆಯಂತೆ ಮುಂಗಾರು ಹಂಗಾಮಿಗೆ ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸಬೇಕಾದ ಅನಿವಾರ್ಯತೆ ಹಾಗೂ ಆಧುನೀಕರಣ ಕಾಮಗಾರಿಯ ವೇಗ ಮತ್ತು ಗುಣಮಟ್ಟ ಪರಿಶೀಲನೆ ಹಿನ್ನೆಲೆಯಲ್ಲಿ ಬುಧವಾರ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ನಾಲೆ ಉದ್ದಕ್ಕೂ ಸಂಚರಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.


ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಆರ್‌ಎಸ್ ಅಣೆಕಟ್ಟೆಯ ಶೂನ್ಯ ಬಿಂದುವಿನಿಂದ ದುದ್ದ ಹೋಬಳಿಯ ಹುಲಿಕೆರೆವರೆಗಿನ 46 ಕಿಮೀ ಉದ್ದದ ನಾಲೆ ಆಧುನೀಕರಣ ಕಾಮಗಾರಿ ನಿಗದಿತ ಸಮಯಕ್ಕೆ ಪೂರ್ಣಗೊಳ್ಳುತ್ತಿಲ್ಲ. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಹಾಗೂ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪಗಳು ಸಾರ್ವಜನಿಕರು ಮತ್ತು ವಿಪಕ್ಷಗಳಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಕಿಮೀ ವ್ಯಾಪ್ತಿಯ ಆಧುನೀಕರಣ ಕಾಮಗಾರಿಯನ್ನು ಜಿಲ್ಲಾಡಳಿತ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ತೆರಳಿ ವೀಕ್ಷಿಸಿ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡರು.


ಸಚಿವರ ಭೇಟಿ ಹಿನ್ನೆಲೆಯಲ್ಲಿ ಅಲ್ಲಲ್ಲಿ ಜಮಾಯಿಸಿದ ರೈತರು, ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಮುಂಗಾರು ಹಂಗಾಮಿನ ಬೆಳೆಗೆ ನೀರು ಒದಗಿಸಬೇಕು. ಹಲವೆಡೆ ಸೋಪಾನ ಕಟ್ಟೆ, ರ‌್ಯಾಂಪ್ ಮತ್ತು ಸೇತುವೆಗಳ ಕಾಮಗಾರಿ ವಿಳಂಬವಾಗುತ್ತಿದೆ. ಶೀಘ್ರ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು. ತಾಲೂಕಿನ ಬೆಟ್ಟಹಳ್ಳಿ ಬಳಿ ಜಮಾಯಿಸಿದ್ದ ರೈತರು ಸಚಿವರು ಬರುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಮಾತ್ರ ಗುಣಮಟ್ಟದ ಕಾಮಗಾರಿ ನಡೆಸಿ ನಿಮಗೆ ಅದನ್ನೇ ತೋರಿಸಲಾಗುತ್ತಿದೆ. ಉಳಿದ ಭಾಗಗಳಲ್ಲಿ ಕಾಮಗಾರಿ ಕಳಪೆಯಾಗಿದೆ. ಕಾಂಕ್ರೀಟ್ ಮಾಡಿದ ಬಳಿಕ ಕ್ಯೂರಿಂಗ್ ಮಾಡುತ್ತಿಲ್ಲ ಎಂದು ಆರೋಪಿಸಿದರು. ಮತ್ತೆ ಕೆಲವರು ಕಾಮಗಾರಿ ಗುಣಮಟ್ಟದಿಂದ ಕೂಡಿದೆ ಎಂದು ಸಚಿವರನ್ನು ಮೆಚ್ಚಿಸುವ ಕೆಲಸ ಮಾಡಿದರು.


ಕಾಮಗಾರಿ ಪರಿಶೀಲನೆ ಬಳಿಕ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ವಿರೋಧ ಪಕ್ಷಗಳ ನಾಯಕರಿಗೆ ಆರೋಪ ಮಾಡುವುದೇ ಕೆಲಸವಾಗಿಬಿಟ್ಟಿದೆ. 1992ರಲ್ಲಿ ಕೆ.ಎನ್.ನಾಗೇಗೌಡರು ನೀರಾವರಿ ಸಚಿವರಾಗಿದ್ದಾಗ ವಿಶ್ವೇಶ್ವರಯ್ಯ ನಾಲೆಯ ಡ್ಯಾಮೇಜ್ ಭಾಗಗಳಲ್ಲಿ ಮಾತ್ರ ಆಧುನೀಕರಣ ಮಾಡಿದ್ದು ಬಿಟ್ಟರೆ ಈವರೆಗೂ ಯಾವ ಸರ್ಕಾರವೂ ಆಧುನೀಕರಣ ಮಾಡಿರಲಿಲ್ಲ. ಈಗ ನಾಲೆ ಸಂಪೂರ್ಣ ಆಧುನೀಕರಣ ನಡೆಯುತ್ತಿದೆ. ಕಾಮಗಾರಿಯಿಂದ ಮಂಡ್ಯ, ಕೊತ್ತತ್ತಿ, ಮದ್ದೂರು ಹಾಗೂ ಮಳವಳ್ಳಿ ಭಾಗಕ್ಕೂ ನೀರು ವೇಗವಾಗಿ ಹರಿಯುತ್ತದೆ. ಕಾಮಗಾರಿಗೂ ಮುನ್ನ ನೀರು ಕೊನೆ ಭಾಗ ತಲುಪುವುದು ತಡವಾಗುತ್ತಿತ್ತು. ಈಗ ಒಂದೆರಡು ದಿನದಲ್ಲೇ ನೀರು ಕೊನೆ ಹಂತಕ್ಕೆ ತಲುಪುತ್ತದೆ. ಇನ್ನೂ 50 ವರ್ಷಗಳ ಕಾಲ ಇದರ ಉಪಯೋಗ ಪಡೆಯಬಹುದಾಗಿದೆ. ರೈತರು ಗುಣಮಟ್ಟದ ಕೆಲಸ ನಡೆಯುತ್ತಿದೆ ಎಂದು ಸಂತಸ ಪಡುತ್ತಿದ್ದಾರೆ ಎಂದರು.


ವಿಪಕ್ಷ ನಾಯಕರು ಸಹಿಸುತ್ತಿಲ್ಲ:
ಜೆಡಿಎಸ್ ಮತ್ತು ಬಿಜೆಪಿ ನಾಯಕರು ನಮ್ಮ ಸರ್ಕಾರ ನಡೆಸುತ್ತಿರುವ ಗುಣಮಟ್ಟದ ಕಾಮಗಾರಿಯನ್ನು ನೋಡಿ ಸಹಿಸಲು ಆಗುತ್ತಿಲ್ಲ. ಅದಕ್ಕಾಗಿ ಅಸಮಾಧಾನದಿಂದ ಆರೋಪ ಮಾಡುತ್ತಿದ್ದಾರೆ. ವಿರೋಧ ಪಕ್ಷದವರಿಗೆ ಯಾವುದೇ ಕೆಲಸ ಆಗಬಾರದು, ರೈತರು ಇದೇ ಸ್ಥಿತಿಯಲ್ಲಿ ಇರಬೇಕು ಎಂಬ ಭಾವನೆ ಇದೆ. ನಾವು ಅವರ ರೀತಿಯ ರಾಜಕಾರಣ ಮಾಡಲು ಹೋಗಲ್ಲ. ನಮ್ಮ ಸರ್ಕಾರಕ್ಕೆ ರೈತರ ಹಿತ ಮುಖ್ಯವಷ್ಟೇ. ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸುವ ವಿಪಕ್ಷ ನಾಯಕರು ಯಾವ ಇಂಜಿನಿಯರನ್ನು ಬೇಕಾದರೂ ಕರೆದು ಕೊಂಡು ಬಂದು ಗುಣಮಟ್ಟ ಪರೀಕ್ಷಿಸಲಿ. ನಾವು ಯಾರನ್ನು ತಡೆಯುವುದಿಲ್ಲ ಎಂದು ತಿರುಗೇಟು ನೀಡಿದರು.
ಕಾಮಗಾರಿ ಪೂರ್ಣಗೊಳ್ಳಲಿ ಬಿಡಲಿ ಅಣೆಕಟ್ಟೆ ತುಂಬಿದ ಬಳಿಕ ನಾಲೆಗಳಿಗೆ ನೀರು ಹರಿಸುವುದು ಖಚಿತ. ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಏನೇ ಆದರೂ ರೈತರಿಗೆ ತೊಂದರೆಯಾಗದಂತೆ ಮುಂದಿನ ಬೆಳೆಗಳಿಗೆ ನೀರು ಒದಗಿಸಲಾಗುವುದು ಇದರಲ್ಲಿ ಯಾವುದೇ ಸಂಶಯಬೇಡ ಎಂದು ಭರವಸೆ ನೀಡಿದರು.

ಬಿಜೆಪಿ ನಾಯಕರಿಗೆ ನೈತಿಕತೆ ಇಲ್ಲ
ಬಿಜೆಪಿ ನಾಯಕರು ಯಾವ ನೈತಿಕತೆಯಿಂದ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಮಾಡೋದು ಅವಶ್ಯಯಕತೆ ಇದೆಯಾ? ಪೆಟ್ರೋಲ್ ಬೆಲೆಯನ್ನು 70ರಿಂದ 100ಕ್ಕೆ ಏರಿಸಿದವರು ಯಾರು? ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳದಲ್ಲಿ ಪೆಟ್ರೋಲ್ ದರ ಎಷ್ಟಿದೆ? ಬಿಜೆಪಿಯವರಂತೆ ತಲೆಕೆಟ್ಟ ರೀತಿ ನಾವು ಬೆಲೆ ಏರಿಕೆ ಮಾಡಿಲ್ಲ. ಇತಿ ಮಿತಿಯಲ್ಲಿ ಏರಿಕೆ ಮಾಡಿದ್ದೇವೆ. ಎಷ್ಟು ದಿನ ಪ್ರತಿಭಟನೆ ಮಾಡುತ್ತಾರೋ ಮಾಡಲಿ. ರೈತರಿಗೆ ಅನುಕೂಲ ಮಾಡಿಕೊಡಬೇಕು, ಅಭಿವೃದ್ಧಿ ಮಾಡಬೇಕು ಎಂದಾಗ ಮಾತ್ರ ಬೆಲೆ ಏರಿಕೆ ಆಗುತ್ತೆ. ತೆರಿಗೆ ಇಲ್ಲದೆ ಸರ್ಕಾರ ನಡೆಸಲು ಆಗುತ್ತಾ ಎಂದು ಪ್ರಶ್ನಿಸಿದರು.


ಜಿಲ್ಲಾಧಿಕಾರಿ ಡಾ.ಕುಮಾರ್, ಉಪವಿಭಾಗಾಧಿಕಾರಿ ಎಲ್.ಎಂ.ನಂದೀಶ್, ನೀರಾವರಿ ಇಲಾಖೆ ಎಇಇ ಜಯರಾಮು, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ಮಧು ಜಿ.ಮಾದೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಮುಖಂಡರಾದ ಬಿ.ರೇವಣ್ಣ ಇತರರಿದ್ದರು.

ದರ್ಶನ್ ಪ್ರಕರಣದಲ್ಲಿ ಸಚಿವರ ಹಸ್ತಕ್ಷೇಪ ಇಲ್ಲ
ಸರ್ಕಾರದ ಯಾವೊಬ್ಬ ಸಚಿವರು ನಟ ದರ್ಶನ್ ಅವರ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಯಾವ ಒತ್ತಡಕ್ಕೂ ನಮ್ಮ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಮಣಿಯುವುದಿಲ್ಲ. ಪ್ರಕರಣ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ನಾಳೆ ನಡೆಯುವ ಕ್ಯಾಬಿನೆಟ್ ಸಭೆ ಬಳಿಕ ಈ ಬಗ್ಗೆ ಉತ್ತರಿಸುತ್ತೇನೆ. ರೇಣುಕಸ್ವಾಮಿ ಕೊಲೆ ಪ್ರಕರಣದ ಎಸ್‌ಪಿಪಿ ಬದಲಾವಣೆ ಮಾಡಿದರೆ ತಪ್ಪೇನು ಎಂಬ ಗೃಹ ಸಚಿವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಸಚಿವಾಲಯ ಮತ್ತು ಮುಖ್ಯಮಂತ್ರಿಗಳು ಪರಿಶೀಲನೆ ಮಾಡಿ ತೀರ್ಮಾನ ತೆಗೆದು ಕೊಳ್ಳಬೇಕಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net