ನಲ್ಲಿಗುಡ್ಡ ಕೆರೆ ಇದ್ದರೂ ದೂರಾಗದ ನೀರಿನ ಸಮಸ್ಯೆ

bidadi1
Published on

*ಐದನೇ ವಾರ್ಡ್‌ಗೆ ಬೇಕಿದೆ ಮೂಲಸೌಕರ್ಯ

* ಪುರಸಭೆಗೆ ಸೇರಿದ ಗ್ರಾಮಗಳ ಅಭಿವೃದ್ಧಿ ಆಸೆಗೆ ಪೆಟ್ಟು

ಚೇತನ್ ಚಕ್ಕೆರೆ ಬಿಡದಿ

ಒಂದು ವಾರ್ಡ್ ಎಂದರೆ ಅಲ್ಲಿ ಎಲ್ಲ ರೀತಿಯ ಸೌಕರ್ಯ ಇರಬೇಕು. ಅದರಲ್ಲೂ ಮೂಲ ಸೌಕರ್ಯ ಇರಲೇಬೇಕು. ಆದರೆ ಇಲ್ಲೊಂದು ವಾರ್ಡ್‌ನಲ್ಲಿ ಇಂದಿಗೂ ಹತ್ತು ಹಲವು ಸಮಸ್ಯೆಗಳಿದ್ದು,ಇದರ ನಡುವೆಯೇ ಜನರು ಕಾಲ ದೂಡುತ್ತಿದ್ದಾರೆ.

ಹೌದು. ಪುರಸಭೆಯ ವಾರ್ಡ್ ನಂ.5ರಲ್ಲಿ ಹತ್ತು ಹಲವು ಸಮಸ್ಯೆ ತಲೆದೋರಿವೆ. ಈ ಹಿಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಶೆಟ್ಟಿಗೌಡನದೊಡ್ಡಿ, ಎಂ. ಕರೇನಹಳ್ಳಿ, ನರಸೇಗೌಡನದೊಡ್ಡಿ, ಹುಚ್ಚಮ್ಮನದೊಡ್ಡಿ ಸೇರಿ 4 ಗ್ರಾಮಗಳನ್ನು ಬಿಡದಿ ಪಟ್ಟಣ ಪಂಚಾಯಿತಿಯಿಂದ ಪುರಸಭೆಗೆ ಮೇಲ್ದರ್ಜೆಗೆ ಏರಿಸಿದ ಹಿನ್ನೆಲೆಯಲ್ಲಿ ಪುರಸಭೆ ವ್ಯಾಪ್ತಿಗೆ ಸೇರಿಸಲಾಯಿತು. ಈ ಗ್ರಾಮಗಳು ಪುರಸಭೆಗೆ ಸೇರಿದ್ದವು. ಇಲ್ಲಿನ ಜನ ವ್ಯವಸಾಯ ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ.

ಗ್ರಾಪಂನಿಂದ ಪುರಸಭೆಗೆ ಬಡ್ತಿ ಹೊಂದಿದ ಕಾರಣದಿಂದ ಗ್ರಾಮಗಳು ಎಲ್ಲ ರೀತಿಯಲ್ಲೂ ಅಭಿವೃದ್ಧಿ ಕಾಣಲಿದೆ ಎಂದು ಎಂದುಕೊಂಡಿದ್ದ ಜನರಿಗೆ ನಿರಾಸೆ ಮೂಡಿದೆ. ಹಲವು ಕಡೆ ರಸ್ತೆಗಳು ಗುಂಡಿ ಬಿದ್ದಿವೆ. ಈ ಹಿಂದೆ ಹಾಕಿದ್ದ ಕಾಂಕ್ರೀಟ್ ರಸ್ತೆಯೆ ಇಂದು ಕೂಡ ಇದೆ. ಚರಂಡಿಗಳು ಅಭಿವೃದ್ಧಿ ಕಂಡಿಲ್ಲ, ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಗ್ರಾಮಗಳ ಪಕ್ಕದಲ್ಲೆ ಬಿಡದಿ ಭಾಗದ ದೊಡ್ಡ ಕೆರೆ ಎನ್ನಿಸಿಕೊಂಡಿರುವ ನಲ್ಲಿಗುಡ್ಡ ಕೆರೆ ಇದ್ದರೂ ನೀರಿನ ಸಮಸ್ಯೆ ತಾಂಡವವಾಡುತ್ತಿದೆ.

ಎಂ.ಕರೇನಹಳ್ಳಿ ಗ್ರಾಮದಲ್ಲಿ ಮಾತ್ರ ಸ್ಮಶಾನ ಇದ್ದು, ಅಭಿವೃದ್ಧಿ ಕೆಲಸ ಮಾಡಲಾಗಿದೆ. ಶೆಟ್ಟಿಗೌಡನದೊಡ್ಡಿ, ನರಸೇಗೌಡನದೊಡ್ಡಿಯಲ್ಲಿ ಸ್ಮಶಾನ ಸಮಸ್ಯೆ ಜೀವಂತವಾಗಿದೆ. ಪುರಸಭೆ ವ್ಯಾಪ್ತಿಗೆ ಸೇರಿದ್ದರೂ ಇಲ್ಲಿಯವರೆಗೂ ಯುಜಿಡಿ ಕಾಮಗಾರಿ ಮಾಡಿಲ್ಲ, ಮನೆ ಮನೆಗೆ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಕೊಟ್ಟಿಲ್ಲ, ಈ ಹಿಂದೆ ಇದ್ದ ಚರಂಡಿಗಳಲ್ಲೆ ನೀರು ಹರಿಯುತ್ತಿದೆ.

ಆಗಬೇಕಿರುವ ಕೆಲಸಗಳು

*ಗ್ರಾಮಗಳಲ್ಲಿ ಯುಜಿಡಿ ಕಾಮಗಾರಿ ಮಾಡಬೇಕಿದೆ

* ಸಿಸಿ ಚರಂಡಿ ನಿರ್ಮಾಣವಾಗಬೇಕಿದೆ

*ನರಸೇಗೌಡನದೊಡ್ಡಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಜತೆಗೆ ಚರಂಡಿ ನಿರ್ಮಾಣವಾಗಬೇಕಿದೆ

* ನೀರಿನ ಬವಣೆ ನೀಗಿಸಲು ಕೊಳವೆ ಬೊರ್‌ವೆಲ್ ವ್ಯವಸ್ಥೆ ಬೇಕಾಗಿದೆ

*ಶೆಟ್ಟಿಗೌಡನದೊಡ್ಡಿ, ನರಸೇಗೌಡನದೊಡ್ಡಿ ಗ್ರಾಮಗಳಲ್ಲಿ ಸ್ಮಶಾನ ನಿರ್ಮಾಣವಾಗಬೇಕಿದೆ

ನಮ್ಮ ವಾರ್ಡ್ ವ್ಯಾಪ್ತಿಗೆ ಬರುವ ನಾಲ್ಕು ಗ್ರಾಮಗಳನ್ನು ಅಭಿವೃದ್ಧಿ ಮಾಡಿ ಮಾದರಿ ಮಾಡಬೇಕೆಂಬ ಆಸೆ ನಮ್ಮಲ್ಲಿದೆ. ಆದರೆ, ನಮಗೆ ಅಧಿಕಾರ ಸಿಕ್ಕಿಲ್ಲ. ಜನರಿಂದ ಆಯ್ಕೆಯಾಗಿ ಎರಡೂವರೆ ವರ್ಷ ಆಗುತ್ತಿದೆ. ಆದರೆ, ಆಡಳಿತಾತ್ಮಕವಾಗಿ ನಮಗೆ ಅಧಿಕಾರ ಸಿಕ್ಕಿಲ್ಲ. ಪುರಸಭೆಯಲ್ಲಿ ನಮ್ಮ ಅಧಿಕಾರ ಇಲ್ಲ. ಹಾಗಾಗಿ ಅಧಿಕಾರಿಗಳು ನಮ್ಮ ಮಾತಿಗೆ ಸೊಪ್ಪು ಹಾಕುತ್ತಿಲ್ಲ. ನಗರೋತ್ಥಾನದಲ್ಲಿರುವ ಅನುದಾನ ಬಳಸಿಕೊಂಡು ನಮ್ಮ ಶ್ರಮ ಮೀರಿ ಅಭಿವೃದ್ಧಿ ಮಾಡಲಾಗುತ್ತಿದೆ. ಬೀದಿ ದೀಪ ಇಲ್ಲದ ಕಾರಣ ನಾವೇ ಸ್ವತಃ ಹಣದಲ್ಲಿ 60 ಕಡೆ ವಿದ್ಯುತ್ ದೀಪ ಅಳವಡಿಸಲಾಗಿದೆ. ಟೊಯೋಟಾ ಸಂಸ್ಥೆಯವರಿಗೆ ಪತ್ರ ಕೂಡ ಬರೆಯಲಾಗಿದೆ ಸಿಎಸ್‌ಆರ್ ಅನುದಾನದಲ್ಲಿ ನಮ್ಮ ವಾರ್ಡ್‌ನಲ್ಲಿ ಬೀದಿ ದೀಪ, ಶುದ್ಧ ಕುಡಿಯುವ ನೀರಿನ ಘಟಕ, ಗ್ರಂಥಾಲಯ ನಿರ್ಮಾಣ ಮಾಡಿಕೊಡುವಂತೆ ಪತ್ರ ಬರೆಯಲಾಗಿದೆ.ಲಲಿತಾ, ನರಸಿಂಹಯ್ಯ, ಪುರಸಭೆ ಸದಸ್ಯೆ

ಜನಸಂಖ್ಯೆ: 2000, ಮತದಾರರು: 850

ವಾರ್ಡ್‌ಗೆ ಸೇರುವ ಗ್ರಾಮಗಳು: ಮುದ್ದಾಪುರ ಕರೇನಹಳ್ಳಿ, ಶೆಟ್ಟಿಗೌಡನದೊಡ್ಡಿ, ನರಸೇಗೌಡನದೊಡ್ಡಿ, ಹುಚ್ಚಮ್ಮನದೊಡ್ಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net