

ಕಾರವಾರ: ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಹಳವಳ್ಳಿ ಗ್ರಾಮದ ಹಸೇಹಳ್ಳಕ್ಕೆ ಕೃಷಿ ಹಾಗೂ ಕುಡಿಯುವ ನೀರಿನ ಉದ್ದೇಶಗಳಿಗೆ ಅಳವಡಿಸಿದ್ದ 350 ಕ್ಕೂ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ ಮಾಡಲಾಗಿದ್ದು, ಗ್ರಾಮಸ್ಥರು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಕಾರವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ 100 ಅಧಿಕ ಗ್ರಾಮಸ್ಥರು, ನಾವು ತಲೆ, ತಲಾಂತರಗಳಿಮದ ತೋಟ ಮಾಡಿಕೊಂಡು ಬಂದಿದ್ದು, ಅದಕ್ಕೆ ಹಳ್ಳದ ನೀರೇ ಆಧಾರ ಈಗ ಬೇಸಿಗೆಯ ಅವಧಿಯಲ್ಲಿ ನೀರು ಕಡಿತ ಮಾಡಿರುವುದರಿಂದ ಹತ್ತಾರು ವರ್ಷಗಳಿಂದ ಬೆಳೆಸಿದ ತೋಟಗಳಿಗೆ ಹಾನಿಯಾಗಲಿದೆ. ಮಾನವೀಯತೆಯಿಂದ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರಿಗೆ ಮನವಿ ಮಾಡಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಸೇಹಳ್ಳ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದಾನಂದ ಭಟ್, ಹಳವಳ್ಳಿ,ಮಳಗಾಂವ, ನುಗ್ಗನಮನೆ, ಸಾಕನಮನೆ, ಕಮ್ಮಾಣಿ ಭಾಗದಲ್ಲಿ ತಲೆ, ತಲಾಂತರಗಳಿಂದ ನಾವು ಜೀವನ ಮಾಡಿಕೊಂಡು ಬಂದವರು. ಕೊಡಸಳ್ಳಿ ಅಣೆಕಟ್ಟೆಯಿಂದ ನಿರಾಶ್ರಿತರಾಗಿ ನಮ್ಮೂರಿಗೆ ಹಲವು ಕುಟುಂಬಗಳು ಬಂದಾಗ ನಾವು ಸ್ವಾಗತ ಮಾಡಿ, ಅವರಿಗೂ ವ್ಯವಸ್ಥೆ ಮಾಡಿಕೊಟ್ಟಿದ್ದೆವು. ಮೂಲ ನಿವಾಸಿಗಳು ಹಾಗೂ ನಿರಾಶ್ರಿತರು ಎಂಬ ಬೇಧವಿಲ್ಲದೇ ಎಲ್ಲರೂ ಒಟ್ಟಾಗಿ ಜೀವನ ನಡೆಸುತ್ತಿದ್ದೇವೆ. 350 ಕುಟುಂಬಗಳು ಇಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸಿವೆ. ಇದೇ ಹೊಳೆ ಹಾಗೂ ನದಿಯಿಂದ 1 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸಿ ಕೃಷಿ ಮಾಡುತ್ತಿದ್ದೇವೆ. ಶಾಲೆ, ದೇವಸ್ಥಾನಗಳಿಗೆ ನೀರುಣಿಸುತ್ತಿದ್ದೇವೆ. ಕುಡಿಯಲು, ಜಾನುವಾರುಗಳಿಗೆ ಬಳಕೆ ಮಾಡುತ್ತಿದ್ದೇವೆ. ಆದರೆ, ವಿದ್ಯುತ್ ಕಡಿತ ಮಾಡಿದ್ದರಿಂದ ಎಲ್ಲವನ್ನೂ ಕಡಿತ ಮಾಡಲಾಗಿದೆ ಎಂದು ವಿವರಿಸಿದರು.
ದಿನಕರ ಹೆಬ್ಬಾರ ಮಾತನಾಡಿ, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಮ ಗಾಂವಕರ್ ಅಕ್ರಮ ಪಂಪ್‌ಸೆಟ್‌ಗಳನ್ನು ತೆರವು ಮಾಡುವಂತೆ ಹೆಸ್ಕಾಂಗೆ ದೂರು ನೀಡಿದ್ದಾರೆ. ಗ್ರಾಮದ ಸಮಸ್ಯೆಯನ್ನು ಸ್ಥಳೀಯ ಗ್ರಾಪಂ ವ್ಯಾಪ್ತಿಯಲ್ಲಿ ಬಗೆಹರಿಸಿಕೊಳ್ಳದೇ ದೂರು ನೀಡಿದ್ದಾರೆ. ಕಿಸಾನ್ ಸಂಘದ ಅಧ್ಯಕ್ಷರಾಗಿ ರೈತರ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾರವಾರ, ಅಂಕೋಲಾ, ಶಹರ 13 ಗ್ರಾಪಂಗಳು ಹಾಗೂ ಸೀಬರ್ಡ್ ನೌಕಾ ಯೋಜನೆಗೆ ನೀರೊದಗಿಸುವ ಸಲುವಾಗಿ. ನಮ್ಮ ಊರಿನ ಸಮೀಪ ಗಂಗಾವಳಿ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ಮಿಸುತ್ತಿರುವ ಕಿಂಡಿ ಅಣೆಕಟ್ಟೆಗೆ ನಮ್ಮ ವಿರೋಧ ಇಲ್ಲ. ಆದರೆ, ಶಿವರಾಮ ಗಾಂವಕರ್ ಹಾಗೂ ಇತರರು ಅಣೆಕಟ್ಟೆಗೆ ವಿರೋಧ ವ್ಯಕ್ತಪಡಿಸಿದ್ದು, ನಾವು ಅವರ ಹೋರಾಟಕ್ಕೆ ಬೆಂಬಲ ನೀಡಿಲ್ಲ ಎಂಬ ಕಾರಣಕ್ಕೆ ನಮ್ಮ ನೀರನ್ನು ಬಂದ್ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯ ಎಲ್ಲೆಡೆ ಪಂಪ್‌ಸೆಟ್‌ಗಳನ್ನು ಪಕ್ಕದ ಹಳ್ಳಕ್ಕೆ ಅಳವಡಿಸಲಾಗಿದೆ. ಹಾಗೆಂದು ಎಲ್ಲವನ್ನೂ ಅಕ್ರಮ ಎಂದು ತೆಗೆದರೆ, ಜಿಲ್ಲೆಯ ಆರ್ಥಿಕ ವ್ಯವಸ್ಥೆಯೇ ಕುಸಿಯಲಿದೆ. ಬೇಕಾದರೆ ಸರ್ಕಾರ ನಿರ್ದಿಷ್ಟ ಶುಲ್ಕ ವಿಧಿಸಿದಲ್ಲಿ ನಾವು ತುಂಬಲು ಸಿದ್ಧರಿದ್ದೇವೆ ಎಂದರು. ಸ್ಥಳೀಯ ಪ್ರಮುಖರಾದ ನಿತ್ಯಾನಂದ ಭಟ್, ರೋಹಿದಾಸ ನಾಯ್ಕ, ಸಂತೋಷ ಭಟ್, ಪ್ರಭಾಕರ ಮರಾಠೆ, ವಿನಯ ಹೆಗಡೆ, ಸೂರ್ಯ ಸಿದ್ದಿ, ಪ್ರಶಾಂತ ನಾಯ್ಕ, ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.
ತಹಸೀಲ್ದಾರರಿಗೆ ಸ್ಥಳ ಪರಿಶೀಲನೆ ಮಾಡಲು ಸೂಚಿಸಲಾಗಿದೆ. ಅವರು ವರದಿ ನೀಡಿದ ನಂತರ ಮುಂದಿನ ಕ್ರಮ ವಹಿಸಲಾಗುವುದು.ಗಂಗೂಬಾಯಿ ಮಾನಕರ್ಜಿಲ್ಲಾಧಿಕಾರಿ, ಉತ್ತರ ಕನ್ನಡ