ನೀರಿನ ಸಮಸ್ಯೆ ಬಗೆಹರಿಸುವ ಭರವಸೆ : ನಗರ ಪಂಚಾಯಿತಿ ಸಾಮಾನ್ಯ ಸಭೆ

2
Published on

ಸುಳ್ಯ: ನಗರದಲ್ಲಿ ನಡೆಯುತ್ತಿರುವ ಶಾಶ್ವತ ಕುಡಿಯುವ ನೀರು ಕಾಮಗಾರಿ ಅಸಮರ್ಪಕತೆ ಕುರಿತು ನಪಂ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವ ಭರವಸೆ ಮಂಗಳವಾರ ನಡೆದ ನಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.

ನಪಂ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅಧ್ಯಕ್ಷತೆ ವಹಿಸಿದ್ದರು. ಸಭೆ ಪ್ರಾರಂಭದಲ್ಲೇ ನಪಂ ಸದಸ್ಯರು, ಇಂಜಿನಿಯರ್‌ಗಳು ಪೈಪ್ ಕಾಮಗಾರಿ ಅವ್ಯವಸ್ಥೆ ನೋಡಿಕೊಂಡು ಬರಲಿ. ಆ ಬಳಿಕ ಸಭೆಯಲ್ಲಿ ಭಾಗವಹಿಸಲಿ ಎಂದು ಸಲಹೆ ನೀಡಿದರು. ಅದರಂತೆ ಅಧ್ಯಕ್ಷರ ಸೂಚನೆ ಮೇರೆಗೆ ಇಂಜಿನಿಯರ್ ಸಭೆಯಿಂದ ತೆರಳಿದರು. 12.30ಕ್ಕೆ ಇಂಜಿನಿಯರ್ ಸಭೆಗೆ ಬಂದ ಬಳಿಕ ಈ ಕುರಿತು ಚರ್ಚೆ ಆರಂಭವಾಯಿತು. ಸದಸ್ಯರಾದ ಎಂ.ವೆಂಕಪ್ಪ ಗೌಡ, ಶರೀಫ್ ಕಂಠಿ, ಕೆ.ಎಸ್.ಉಮ್ಮರ್, ವಿನಯ್ ಕುಮಾರ್ ಕಂದಡ್ಕ, ಕಿಶೋರಿ ಶೇಟ್ ಸಹಿತ ಎಲ್ಲರೂ ಸಮಸ್ಯೆ ಮುಂದಿಟ್ಟರು.

ಇಂಜಿನಿಯರ್‌ಗಳು ಕೆಲವೆಡೆ ಸಮಸ್ಯೆ ಆಗಿರುವುದು ನಿಜ. ಇಂದೇ ಗುತ್ತಿಗೆದಾರರನ್ನು ಬರಲು ಹೇಳಿದ್ದೇವೆ. ಸಮಸ್ಯೆ ಎರಡು ದಿನದಲ್ಲಿ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ನೀರು ಸರಬರಾಜು ಕುರಿತು ಚರ್ಚೆ ನಡೆಯಿತು. ನಪಂ ಇಂಜಿನಿಯರ್ ಶಿವಕುಮಾರ್, ಬಹುಗ್ರಾಮ ಕುಡಿಯುವ ನೀರು ಯೋಜನೆ ಲೈನ್ ನಗರದಲ್ಲಿ ಹಾದು ಹೋಗುವಾಗ ಮತ್ತೆ ಸಮಸ್ಯೆಯಾಗುವ ಕುರಿತು ಸಭೆಯಲ್ಲಿ ಪ್ರಸ್ತಾಪವಿಟ್ಟರು. ಈ ಕುರಿತು ಎರಡು ಯೋಜನೆಗೆ ಸಂಬಂಧಿಸಿದ ಇಂಜಿನಿಯರ್‌ಗಳು ಮಾತನಾಡಿಕೊಂಡು ಮುಂದುವರಿಯಬೇಕೆಂಬ ಅಭಿಪ್ರಾಯ ಬಂತು.

ವಿಷಯ ಪ್ರಸ್ತಾಪಿಸಿದ ಸದಸ್ಯ ಎಂ.ವೆಂಕಪ್ಪ ಗೌಡ, ಸುಳ್ಯದಲ್ಲಿ ಒಂದಂಕಿ ಲಾಟರಿಯಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಈ ಕುರಿತು ಹಲವು ಮಂದಿ ನಮಗೆ ದೂರಿಕೊಳ್ಳುತ್ತಿದ್ದಾರೆ. ಪೊಲೀಸ್ ಇಲಾಖೆಗೆ ಸೂಚಿಸಿ ಎಂದು ಹೇಳಿದರು. ನಾಮನಿರ್ದೇಶನ ಸದಸ್ಯ ರಾಜು ಪಂಡಿತ್, ಸದಸ್ಯ ಶರೀಫ್ ಕಂಠಿ ಒಂದಂಕಿ ಲಾಟರಿ ಸಮಸ್ಯೆ ಕುರಿತು ಧ್ವನಿ ಎತ್ತಿದರು. ಬಳಿಕ ಪೊಲೀಸ್ ಇಲಾಖೆಗೆ ಪತ್ರ ಬರೆಯುವ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಉಪಾಧ್ಯಕ್ಷ ಬುದ್ಧನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net