ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಅಪರಾಧಿಗೆ 5 ವರ್ಷ ಜೈಲು, 20 ಸಾವಿರ ರೂ. ದಂಡ

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ಮಂಗಳೂರು: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-1 (ಪೋಕ್ಸೋ ನ್ಯಾಯಾಲಯ)ರಲ್ಲಿ ಸಾಬೀತಾಗಿದ್ದು, ಅಪರಾಧಿಗೆ ನ್ಯಾಯಾಲಯ 5 ವರ್ಷಗಳ ಸಾದಾ ಸಜೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.

ಮೂಡುಬಿದಿರೆ ಪಡುಮಾರ್ನಾಡು ಕೆಸರುಗದ್ದೆ ನಿವಾಸಿ ಆಸಿಪ್ (43) ಶಿಕ್ಷೆಗೊಳಗಾದ ಅಪರಾಧಿ.

ಪ್ರಕರಣದ ವಿವರ: 2019ರ ಫೆ.10ರಂದು ಸಂಜೆ ಮಾರ್ಪಾಡಿ ಜೈನ್‌ಪೇಟೆ ಸಮೀಪದ ಹೈಸ್ಕೂಲೊಂದರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸ್ಪೆಷಲ್ ಕ್ಲಾಸ್ ಮುಗಿಸಿ ತನ್ನ ಸಹಪಾಠಿ ಜತೆ ನಿಂತಿದ್ದಳು. ಈ ಸಂದರ್ಭ ವಿದ್ಯಾರ್ಥಿನಿಯ ತಾಯಿ ನೆರೆಮನೆಯ ಯುವಕನ ಜತೆ ತನ್ನ ಮಗಳನ್ನು ಬೈಕ್‌ನಲ್ಲಿ ಕರೆದುಕೊಂಡು ಬರಲು ಹೇಳಿದ ಕಾರಣ ಆತ ಬೈಕ್‌ನಲ್ಲಿ ಬಂದು ವಿದ್ಯಾರ್ಥಿನಿ ಬಳಿ ನಿಲ್ಲಿಸಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ಮತ್ತು ಆಕೆಯ ಸಹಪಾಠಿ ಬೈಕ್‌ನಲ್ಲಿ ತೆರಳಲು ಅಣಿಯಾಗುತ್ತಿದ್ದಾಗ ವಿದ್ಯಾರ್ಥಿನಿಯ ದೂರದ ಸಂಬಂಧಿ ಆರೋಪಿ ಆಸಿಪ್ ತಡೆದು ನಿಲ್ಲಿಸಿ ‘ನೀನು ಆ ಧರ್ಮದವನೊಟ್ಟಿಗೆ ಯಾಕೆ ಹೋಗುತ್ತೀಯಾ?’ ಎಂದು ಹೇಳಿ ವಿದ್ಯಾರ್ಥಿನಿಯ ಕೆನ್ನೆಗೆ ಹೊಡೆದು ಮಾನಹಾನಿ ಮಾಡಿದ್ದಾನೆ. ಬಳಿಕ ಆಕೆಗೆ ಲೈಂಗಿಕ ಕಿರುಕುಳ ನೀಡಿ ಎಳೆದಾಡಿದ್ದಾನೆ. ಇದಾದ ಬಳಿಕ ಬೈಕ್‌ನಲ್ಲಿ ಬಂದ ಯುವಕನನ್ನು ದೂಡಿ, ಹಲ್ಲೆಗೈದಿದ್ದಾನೆ.ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬಗ್ಗೆ ಸಮಗ್ರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿಜಯ್ ದೇವರಾಜ್ ಅಪರಾಧವನ್ನು ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಅಪರಾಧಿಗೆ ಐಪಿಸಿ-341 ರಡಿ 1 ತಿಂಗಳ ಸಾದಾ ಸಜೆ, ಐಪಿಸಿ 354ರಡಿ 5ವರ್ಷ ಸಾದಾ ಸಜೆ ಮತ್ತು 10 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 3 ತಿಂಗಳ ಸಾದಾ ಸಜೆ, ಐಪಿಸಿ 323ರಡಿ 1ವರ್ಷ ಸಾದಾ ಸಜೆ, ಸೆಕ್ಷನ್ 12ಪೋಕ್ಸೋದಡಿ 3 ವರ್ಷ ಸಾದಾ ಸಜೆ ಮತ್ತು 10 ಸಾವಿರ ರೂ. ದಂಡ ಪಾವತಿಸಬೇಕು.

 ವಿದ್ಯಾರ್ಥಿನಿಗೆ ಪರಿಹಾರ: ದಂಡದ 20 ಸಾವಿರ ರೂ. ಮೊತ್ತದಲ್ಲಿ 10ಸಾವಿರ ರೂ. ವಿದ್ಯಾರ್ಥಿನಿಗೆ ಪರಿಹಾರ ನೀಡಬೇಕು ಮತ್ತು ಅಪ್ರಾಪ್ತ ವಿದ್ಯಾರ್ಥಿನಿಗೆ ಕಾನೂನು ಸೇವಾ ಪ್ರಾಧಿಕಾರ 1ಲಕ್ಷ ರೂ. ಪರಿಹಾರ ನೀಡಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಮೂಡುಬಿದಿರೆ ಈ ಹಿಂದಿನ ಇನ್‌ಸ್ಪೆಕ್ಟರ್ ದೇಜಪ್ಪ ದೋಷಾರೊಪಣಾ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ಸರ್ಕಾರದ ಪರವಾಗಿ ವಾದಿಸಿದ್ದರು.

ಅಪರಾಧಿಯ ಕ್ರಿಮಿನಲ್ ಹಿನ್ನಲೆ: ಅಪರಾಧಿಯ ವಿರುದ್ಧ ಮಂಗಳೂರು ಮಹಿಳಾ ಠಾಣೆಯಲ್ಲಿ 2 ಪ್ರಕರಣ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2ಪ್ರಕರಣ, ಉರ್ವ ಪೊಲೀಸ್ ಠಾಣೆಯಲ್ಲಿ 1ಪ್ರಕರಣ, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ 1ಪ್ರಕರಣ ದಾಖಲಾಗಿದೆ. ಅತ್ಯಾಚಾರ, ಮಾದಕ ಸೇವನೆ ಮತ್ತು ಮಾರಾಟ ಪ್ರಕರಣದಲ್ಲೂ ಈತ ಭಾಗಿಯಾಗಿದ್ದು, ಈ ಪ್ರಕರಣ ವಿಚಾರಣೆ ನಡೆಯುತ್ತಿದೆ.

ಆರೋಪಿ ವಿವಿಧ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net