

ರಾಮಕಿಶನ್ ಕೆ.ವಿ. ಬೆಂಗಳೂರು
ನಾಲ್ಕು ಸಾವಿರ ನಿವಾಸಿಗಳು ವಾಸವಾಗಿರುವ ಕೆ.ಆರ್.ಪುರ ಪೊಲೀಸ್ ವಸತಿಗೃಹದಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. 2 ಕೊಳವೆಬಾವಿ ಸುಸ್ಥಿತಿಯಲ್ಲಿದ್ದರೂ, ಅಗತ್ಯಕ್ಕೆ ತಕ್ಕಷ್ಟು ನೀರು ಲಭ್ಯವಾಗುತ್ತಿಲ್ಲ. ಹೀಗಾಗಿ ಪೊಲೀಸರು ನಿತ್ಯ 12-15 ಟ್ಯಾಂಕರ್ ನೀರು ತರಿಸಿಕೊಳ್ಳುವಂತಾಗಿದೆ. ಮನವಿ ಮಾಡಿದರು ಜಲಮಂಡಳಿಯಿಂದ ಅಗತ್ಯ ಪ್ರಮಾಣದಷ್ಟು ನೀರು ಪೂರೈಕೆಯಾಗುತ್ತಿಲ್ಲ ಎಂದು ಪೊಲೀಸ್ ಕುಟುಂಬಗಳು ಆರೋಪ ಮಾಡಿವೆ.
ವಸತಿಗೃಹದಲ್ಲಿ 8 ಬ್ಲಾಕ್ಗಳಿದ್ದು, 528 ಮನೆಗಳಿವೆ. ಪೊಲೀಸ್ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರು ಸೇರಿ ಸುಮಾರು 4 ಸಾವಿರ ಜನರು ವಾಸವಾಗಿದ್ದು, ನಿತ್ಯ 1.5 ಲಕ್ಷ ಲೀಟರ್ ನೀರಿನ ಅಗತ್ಯವಿದೆ. ವಸತಿಗೃಹದಲ್ಲಿ ಸುಮಾರು 13 ಲ ಲೀಟರ್ ಸಾಮರ್ಥ್ಯದ ಒಂದು ನೀರಿನ ಸಂಪ್ ಕೂಡ ಇದೆ.
ವಸತಿ ಗೃಹದಲ್ಲಿ 6 ಬ್ಲಾಕ್ಗಳಿದ್ದ ಸಮಯದಲ್ಲಿ ಅಷ್ಟಾಗಿ ನೀರಿನ ಸಮಸ್ಯೆ ಎದುರಾಗಿರಲಿಲ್ಲ. ಇತ್ತೀಚೆಗೆ ಹೊಸದಾಗಿ ಎರಡು ಬ್ಲಾಕ್ಗಳು ಉದ್ಘಾಟನೆಯಾದ ಬಳಿಕ ನಿವಾಸಿಗಳ ಸಂಖ್ಯೆ ಹೆಚ್ಚಿದೆ. ಕಟ್ಟಡದ ಗುತ್ತಿಗೆದಾರ ಸಮರ್ಪಕವಾಗಿ ನೀರಿನ ವ್ಯವಸ್ಥೆ ಮಾಡಬೇಕಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಿವಾಸಿಗಳೇ ಹಣ ಹೊಂದಿಸಿ 4 ಹೊಸ ಕೊಳವೆಬಾವಿ ಕೊರೆಯಿಸಿದ್ದೇವೆ. ಇದಕ್ಕಾಗಿ 18 ಲ ರೂ., ರ್ಖಚಾಗಿದ್ದರೂ, ನೀರು ಮಾತ್ರ ಸಿಕ್ಕಿಲ್ಲ. ಜತೆಗೆ 5 ಲಕ್ಷ ರೂ. ಖರ್ಚು ಮಾಡಿ 15 ದಿನಗಳ ಹಿಂದೆ ಎಸ್ಟಿಪಿ ಅಳವಡಿಸಿದ್ದೇವೆ. ಒಟ್ಟಾರೆ ನೀರಿನ ಸಮಸ್ಯೆ ಬಗೆಹರಿಸಲು ಸುಮಾರು 30 ಲಕ್ಷ ಖರ್ಚು ಮಾಡಿದ್ದೇವೆ ಎಂದು ವಸತಿಗೃಹದಲ್ಲಿ ವಾಸವಾಗಿರುವ ಪೊಲೀಸ್ ಅಧಿಕಾರಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಕಳೆದ 8 ತಿಂಗಳಿನಿಂದ ನೀರಿನ ಸಮಸ್ಯೆ ಹೆಚ್ಚುತ್ತಿದ್ದು, ನಿತ್ಯ ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದೇವೆ. ನೀರಿನ ಅಗತ್ಯಗಳಿಗಾಗಿ 2 ಪ್ರತ್ಯೇಕ ಕೊಳವೆಬಾವಿಗಳಿವೆ. ಆರಂಭದಲ್ಲಿ ನಿವಾಸಿಗಳ ಅಗತ್ಯಗಳನ್ನು ಪೂರೈಸುವಷ್ಟು ನೀರು ಲಭ್ಯವಾಗುತ್ತಿಲ್ಲ. ನಂತರ ಅಂತರ್ಜಲ ಕುಸಿತದಿಂದ ಅಗತ್ಯ ಪ್ರಮಾಣದಷ್ಟು ನೀರು ಲಭ್ಯವಾಗುತ್ತಿಲ್ಲ.
ಕಾವೇರಿ ನೀರಿನ ಸಂಪರ್ಕ ಪಡೆಯಲು ವಸತಿಗೃಹ ನಿರ್ಮಾಣದ ಸಮಯದಲ್ಲಿ ಪೊಲೀಸ್ ಗೃಹ ಮಂಡಳಿ ಜಲಮಂಡಳಿಗೆ ಪ್ರಾರಂಭಿಕವಾಗಿ 1.3 ಕೋಟಿ ರೂ. ಪಾವತಿಸಿದೆ. ಆದರೆ ಜಲಮಂಡಳಿ ವಾರದಲ್ಲಿ 2 ಬಾರಿ ಮಾತ್ರ ಸಮಯಕ್ಕನುಗುಣವಾಗಿ ಕಾವೇರಿ ನೀರು ಪೂರೈಸುತ್ತಿದೆ. ಈ ನೀರು 4 ಸಾವಿರ ನಿವಾಸಿಗಳಿಗೆ ಸಾಲುತ್ತಿಲ್ಲ. ಸಮಸ್ಯೆ ಕುರಿತು ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಜಲಮಂಡಳಿ ಅಧಿಕಾರಿಗಳನ್ನು ಹಲವು ಬಾರಿ ಸಂಪರ್ಕಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಪರಿಶೀಲಿಸುವುದಾಗಿ ಅಧಿಕಾರಿಗಳು ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಸತಿ ಗೃಹದಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಸದ್ಯ ನಿವಾಸಿಗಳ ದೈನಂದಿನ ನೀರಿನ ಅಗತ್ಯ ಪೂರೈಸಲು ರೂ.1,600 ನೀಡಿ ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದೇವೆ. 528 ನಿವಾಸಗಳ ಬಳಕೆಗೆ ದಿನಂಪ್ರತಿ 12 ಟ್ಯಾಂಕರ್ಗಳ ಅಗತ್ಯವಿದೆ. ಇಲ್ಲಿ ವಾಸಿಸುತ್ತಿರುವವರು ಗ್ರೂಪ್ ಸಿ ಮತ್ತು ಡಿ ದರ್ಜೆಯ ಅಧಿಕಾರಿಗಳು. ಮನೆಖರ್ಚು, ವೈದ್ಯಕಿಯ ವೆಚ್ಚ, ಮಕ್ಕಳ ಶಾಲಾ ಶುಲ್ಕ ಇತ್ಯಾದಿಗಳಿಗೆ ವೇತನ ಸಾಕಾಗುತ್ತದೆ. ಇದೀಗ ಪ್ರತಿ ತಿಂಗಳ ಉಳಿತಾಯವನ್ನು ಟ್ಯಾಂಕರ್ ನೀರಿಗೆ ಖರ್ಚು ಮಾಡಬೇಕಾಗುತ್ತಿದೆ. ಒಟ್ಟಾರೆ ನಿವಾಸಿಗಳು ಟ್ಯಾಂಕರ್ ನೀರಿಗಾಗಿ ಪ್ರತಿ ತಿಂಗಳು 4.80 ಲಕ್ಷ ರೂ. ವ್ಯಯಿಸುವಂತಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ವಸತಿಗೃಹಕ್ಕೆ ಬುಧವಾರ ಮತ್ತು ಭಾನುವಾರದಂದು ಮಾತ್ರ ಜಲಮಂಡಳಿ ಕಾವೇರಿ ನೀರು ಸರಬರಾಜು ಮಾಡುತ್ತಿದೆ. ಕೆಲ ತಿಂಗಳುಗಳಿಂದ ಸರಿಯಾಗಿ ನೀರು ಪೂರೈಕೆಯಾಗದಿದ್ದರೂ, ಶುಲ್ಕ ಮಾತ್ರ ಹೆಚ್ಚು ಪ್ರಮಾಣದಲ್ಲಿ ಬರುತ್ತಿದೆ. ಒಟ್ಟಾರೆ ಜಲಮಂಡಳಿ ಶುಲ್ಕ ಹಾಗೂ ಟ್ಯಾಂಕರ್ ನೀರಿನ ಶುಲ್ಕ ಭರಿಸುತ್ತಿರುವುದರಿಂದ ಆರ್ಥಿಕ ಹೊರೆಯಾಗುತ್ತಿದೆ. ಸಮಸ್ಯೆ ಅರಿತುಕೊಂಡು ಜಲಮಂಡಳಿ ವಾರದ ಎಲ್ಲ ದಿನವೂ ನೀರು ಸರಬರಾಜು ಮಾಡಬೇಕು ಎಂದು ನಿವಾಸಿಗಳು ವಿನಂತಿಸಿಕೊಂಡಿದ್ದಾರೆ.
ವಸತಿ ಗೃಹದಲ್ಲಿ ಎದುರಾಗಿರುವ ನೀರಿನ ಸಮಸ್ಯೆ ಕುರಿತು ರಾಧಮ್ಮ ಎಂಬುವವರು ಪೊಲೀಸ್ ಇಲಾಖೆ ಶನಿವಾರ ಆಯೋಜಿಸುವ ಜನಸಂಪರ್ಕ ಸಭೆಯಲ್ಲಿ ಪ್ರಸ್ತಾಪಿಸಿದರು. ಸ್ವಂತ ಖರ್ಚಿನಲ್ಲಿ 4 ಕೊಳವೆಬಾವಿ ಕೊರೆಯಿಸಿದ್ದರೂ ನೀರಿಲ್ಲದಾಗಿದೆ. ಜತೆಗೆ ಹಲವು ಮೂಲಸೌಕರ್ಯ ಕೊರೆತೆಯಿದೆ ಎಂದರು. ಪ್ರತಿಯಾಗಿ 'ಇಲಾಖೆಯ ಆಂತರಿಕ ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ಹೇಳಿಕೊಳ್ಳಬೇಕು. ನೀವು ಪ್ರಸ್ತಾಪಿಸಿರುವ ಅಂಶಗಳನ್ನು ಗಮನಿಸಿಕೊಂಡಿದ್ದೇವೆ. ಸಹಾಯಕ ಪೊಲೀಸ್ ಆಯುಕ್ತರು ಸ್ಥಳಕ್ಕೆ ಬಂದು ಪರಿಶೀಲಿಸುತ್ತಾರೆ' ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.