

ಕೊಳ್ಳೇಗಾಲ: ಅಧಿಕ ಮಳೆಯಿಂದ ಮೈದುಂಬಿ ಹರಿಯುತ್ತಿದ್ದ ಕಾವೇರಿ ನದಿ ನೀರು ಬುಧವಾರ ಇಳಿಮುಖವಾಗಿದೆ.
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ವರುಣನ ಆರ್ಭಟ ಹೆಚ್ಚಾಗಿದ್ದರಿಂದ ಕಬಿನಿ ಮತ್ತು ಕೆಆರ್‌ಎಸ್ ಭರ್ತಿಯಾಗಿತ್ತು. ನೀರಿನ ಒಳಹರಿವು ಹೆಚ್ಚಾಗಿ ಆ.18 ರಂದು ಎರಡೂ ಜಲಾಶಯಗಳಿಂದ ಕಾವೇರಿ ನದಿಗೆ 1.23 ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗಿತ್ತು.
ತಾಲೂಕಿನ ನದಿ ಪಾತ್ರದ ಗ್ರಾಮಗಳಾದ ಮುಳ್ಳೂರು, ಹಳೆ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ, ಸತ್ತೇಗಾಲ ಯಡಕೂರಿಯ ಗ್ರಾಮಗಳಲ್ಲಿ ನೂರಾರು ಎಕರೆ ಜಮೀನು ಮುಳುಗಡೆಗೊಂಡಿತ್ತು. ಒಂದೇ ದಿನಕ್ಕೆ ಪ್ರವಾಹ ಮಟ್ಟದಲ್ಲಿ ಹರಿದ ನೀರನ್ನು ಕಂಡು ಗ್ರಾಮಸ್ಥರು ಗಾಬರಿಗೊಂಡಿದ್ದರು. ಇದೀಗ ಆ.19ರಂದು ಜಲಾಶಯಗಳಿಂದ 75 ಸಾವಿರ ಕ್ಯೂಸೆಕ್ ಮತ್ತು ಬುಧವಾರ 30 ಸಾವಿರ ಕ್ಯೂಸೆಕ್ ನೀರನ್ನು ಮಾತ್ರ ಬಿಟ್ಟ ಪರಿಣಾಮ ಕಾವೇರಿ ನದಿ ನೀರಿನ ಮಟ್ಟ ಇಳಿಮುಖ ಕಂಡಿದೆ. ಪ್ರವಾಹ ಭೀತಿಯಲ್ಲಿದ್ದ ನದಿ ಪಾತ್ರಗಳ ಜನರು ನಿಟ್ಟುಸಿರುಬಿಟ್ಟಿದ್ದಾರೆ.
ಪ್ರತಿವರ್ಷ ಮಳೆಗಾಲದಲ್ಲಿ ತಾಲೂಕಿನ ನದಿ ಪಾತ್ರದ ಗ್ರಾಮಗಳ ಜನರಿಗೆ ಪ್ರವಾಹ ಭೀತಿ ತಪ್ಪಿದ್ದಲ್ಲ. ಈ ಬಗ್ಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಅಧಿವೇಶನದಲ್ಲಿ ಗಮನ ಸೆಳೆದಿದ್ದಾರೆ. ಆ ಮೂಲಕ ಇದಕ್ಕೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ತಡೆಗೋಡೆ ನಿರ್ಮಾಣಕ್ಕೂ ಒತ್ತಾಯಿಸಿದ್ದಾರೆ. ಅಧಿವೇಶನದಲ್ಲಿ ಶಾಸಕರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಪ್ರಸ್ತುತ ಮುಳ್ಳೂರು, ಹಳೇ ಹಂಪಾಪುರ ಮತ್ತು ದಾಸ ನಪುರ ಗ್ರಾಮಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಲು 18.50 ಕೋಟಿ ರೂ. ಮೊತ್ತದ ಅಂದಾಜು ಪಟ್ಟಿಗೆ ಅನುಮೋದನೆ ಹಾಗೂ ಅನುದಾನ ಕೋರಿ ಪ್ರಸ್ತಾವನೆ ಸ್ವೀಕೃತವಾಗಿದ್ದು ಪರಿಶೀಲನೆಯಲ್ಲಿದೆ ಉತ್ತರಿಸಿದ್ದಾರೆ.ಬುಧವಾರ ಕಬಿನಿ ಹಾಗೂ ಕೆಆರ್‌ಎಸ್‌ನಿಂದ 30 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿದೆ. ಇವೆಲ್ಲದರ ಕಾರಣ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಇಳಿಮುಖವಾಗಿದೆ. ನದಿ ಪಾತ್ರದ ಗ್ರಾಮಗಳ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ.
ಐ.ಈ.ಬಸವರಾಜು ತಹಸೀಲ್ದಾರ್ ಕೊಳ್ಳೇಗಾಲ