ಕೈಲಾಂಚ ಹೋಬಳಿಗೆ 4 ತಿಂಗಳಲ್ಲಿ ನೀರು

FotoJet (3)
Published on

 ಶಾಸಕ ಇಕ್ಬಾಲ್ ಹುಸೇನ್ ಮಾಹಿತಿ | ಮಾಯಗಾನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ

 ರಾಮನಗರ : ಕಸಬಾ ಕೈಲಾಂಚ ಹೋಬಳಿ ವ್ಯಾಪ್ತಿಯಲ್ಲಿ 600 ಕೋಟಿ ರೂ.ವೆಚ್ಚದ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದ್ದು, ನಾಲ್ಕು ತಿಂಗಳಲ್ಲಿ ಯೋಜನೆ ಚಾಲನೆಗೊಳ್ಳಲಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ರಾಮನಗರ ತಾಲೂಕಿನ ಮಾಯಗಾನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸೋಮವಾರ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ಮಾಯಗಾನಹಳ್ಳಿ ಬಸವೇಶ್ವರ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಗ್ರಾಪಂ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆಗಳು ಮನೆ ಮನೆಗೆ ತಲುಪುತ್ತಿವೆ. ಮಾಯಗಾನಹಳ್ಳಿ ಗ್ರಾಪಂನಲ್ಲಿ ನಾಲ್ಕೂವರೆ ಕೋಟಿ ರೂ.ವೆಚ್ಚದಲ್ಲಿ ಧಾರಾಪುರ, ಕೆಂಜಿಗರಹಳ್ಳಿ, ಮಾಯಗಾನಹಳ್ಳಿ ರಸ್ತೆ ಅಭಿವೃದ್ಧಿ, 75 ಲಕ್ಷ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಸೇರಿ ಒಟ್ಟು 20 ಕೋಟಿ ರೂ. ಅನುದಾನದಲ್ಲಿ ಕ್ಷೇತ್ರದ ಪ್ರತಿ ಗ್ರಾಪಂಗೆ 1 ಕೋಟಿ ರೂ.ನಂತೆ ಮಾಯಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಕೆರೆ, ಕುಂಟೆ, ರಸ್ತೆ, ಚರಂಡಿ ಅಭಿವೃದ್ಧಿಗೆ ಅನುದಾನ ಬಳಸಲಾಗುತ್ತಿದೆ ಎಂದರು.

ಗ್ರಾಮಠಾಣಾ ಹೊರಗುಳಿದಿರುವ ಸ್ವತ್ತುಗಳಿಗೆ ಉಪ ಗ್ರಾಮಗಳಾಗಿ ಗುರುತಿಸುವ ಚಿಂತನೆ ಮಾಡಲಾಗುತ್ತಿದೆ. ಇದರಿಂದ ಜನರಿಗೆ ಅಗತ್ಯ ದಾಖಲಾತಿ ಸಿಗಲಿದೆ. ಗ್ರಾಮಠಾಣಾ ಸ್ವತ್ತುಗಳಿಗೆ ಇ-ಖಾತೆ ಸೌಲಭ್ಯ ಒದಗಿಸಲಾಗುತ್ತಿದೆ. ಎಲ್ಲರೂ ಇ-ಖಾತೆ ಸೌಲಭ್ಯ ಪಡೆಯಿರಿ. ಗ್ರಾಪಂನಲ್ಲಿ ಇ-ಸ್ವತ್ತು ಪಡೆಯಲು ಲಂಚ ಕೊಡಬೇಡಿ. ಈಗಾಗಲೇ ತಮ್ಮ ಜಮೀನುಗಳ ಪಿ.ನಂಬರ್ ಸರ್ವೇ ನಡೆಸಿ ದುರಸ್ತಿ ಮಾಡಲಾಗುತ್ತಿದೆ ಎಂದರು.

ಮಾಜಿ ಶಾಸಕ ಕೆ.ರಾಜು, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ಗ್ರಾಪಂ ಅಧ್ಯಕ್ಷೆ ಗೀತಾ ಪರಮಶಿವಯ್ಯ, ಉಪಾಧ್ಯಕ್ಷ ವೆಂಕಟೇಶ್‌ಮೂರ್ತಿ, ಸದಸ್ಯರಾದ ರಂಜನ್, ಮಾಯಮ್ಮ, ಸ್ರೀನಿವಾಸ್, ನಾಗಮ್ಮ, ನಾಗರಾಜು, ಮುಖಂಡರಾದ ಎಂ.ರೇವಣ್ಣ, ಲೋಕೇಶ್, ಮಹದೇವಯ್ಯ, ಆಸಿಫ್, ತೇಜು, ಗ್ಯಾರಂಟಿ ಅನುಷ್ಠಾನಗಳ ಸಮಿತಿ ತಾಲೂಕು ಅಧ್ಯಕ್ಷ ವಿ.ಎಚ್.ರಾಜು, ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಪಿಡಿಒ ಮಹದೇವೇಗೌಡ, ಕೆಆರ್‌ಐಡಿಎಲ್ ಎಇಇ ಲಕ್ಷ್ಮೀ ಇದ್ದರು.

ಮಂಜೂರಾತಿ ಪತ್ರ ವಿತರಣೆ

ಕೆಂಪನಹಳ್ಳಿ, ಮಾದಾಪುರ, ಮಾಯಗಾನಹಳ್ಳಿ, ಕೆಂಜಿಗರಹಳ್ಳಿ, ಸಂಗನಬಸವನದೊಡ್ಡಿ, ಬಸವನಪುರ, ಕೇತೋಹಳ್ಳಿ, ಗಂಗರಾಜನಹಳ್ಳಿ, ಧಾರಾಪುರ ಗ್ರಾಮಗಳಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕೆಲಸಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು. ಬಳಿಕ ಗ್ರಾಪಂವತಿಯಿಂದ ಇ-ಖಾತೆ ಮತ್ತು ಬಸವ ವಸತಿ ಯೋಜನೆಯಲ್ಲಿ ಮನೆ ಮಂಜೂರಾದವರಿಗೆ ಮಂಜೂರಾತಿ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net