ಹಳೇಬೀಡು-ಮಾದಿಹಳ್ಳಿ ಕೆರೆಗಳಿಗೆ ನೀರು

31blrp1
ಬೇಲೂರು ತಾಲೂಕಿನ ಹಳೇಬೀಡು-ಮಾದಿಹಳ್ಳಿ ಹೋಬಳಿಗಳ ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ಹರಿಸಲು ಮೋಟಾರ್ ಪಂಪ್‌ಗಳಿಗೆ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ, ಶಾಸಕ ಎಚ್.ಕೆ.ಸುರೇಶ್ ಚಾಲನೆ ನೀಡಿದರು. ಆನಂದ್, ಕೆ.ಪಿ.ಕುಮಾರ್ ಇತರರು ಇದ್ದರು.
Published on

ಬೇಲೂರು: ತಾಲೂಕಿನ ಹಳೇಬೀಡು-ಮಾದಿಹಳ್ಳಿ ಹೋಬಳಿಗಳ ಕೆರೆಗಳಿಗೆ ಏತನೀರಾವರಿ ಮೂಲಕ ನೀರು ಹರಿಸುವ ಮೋಟಾರ್ ಪಂಪ್‌ಗಳಿಗೆ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಹಾಗೂ ಶಾಸಕ ಎಚ್.ಕೆ.ಸುರೇಶ್ ಬುಧವಾರ ಹಾಲ್ತೊರೆ ಜಾಕ್‌ವೆಲ್‌ನಲ್ಲಿ ಚಾಲನೆ ನೀಡಿದರು.

ಶಾಸಕ ಎಚ್.ಕೆ.ಸುರೆಶ್ ಮಾತನಾಡಿ, ಹಳೇಬೀಡು-ಮಾದಿಹಳ್ಳಿ ಹೋಬಳಿಗಳ ಕೆರೆಗಳಿಗೆ ನೀರು ಹರಿಸುವ ಏತ ನೀರಾವರಿಗೆ ಸ್ವಾಮೀಜಿ ನೇತೃತ್ವದಲ್ಲಿ ರೈತರು, ಸಾರ್ವಜನಿಕರ ಸಹಕಾರದಿಂದ ಯೋಜನೆ ಸಾಕಾರಗೊಂಡಿದೆ. 2008ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 15 ಕೋಟಿ ರೂ. ನೀಡಿದ್ದರಿಂದ ಏತ ನೀರಾವರಿ ಯೋಜನೆ ನಿರ್ಮಾಣವಾಗಿದೆ. ಎತ್ತಿನಹೊಳೆ ಯೋಜನೆಯ ಕಾಮಗಾರಿ ತಾಲೂಕಿನಲ್ಲಿ ಅರ್ಧಕ್ಕೆ ನಿಂತಿದ್ದು, ನಾಲೆಯಲ್ಲಿ ಬರುವ ನೀರು ಜಮೀನುಗಳಿಗೆ ಹೋಗುತ್ತಿರುವುದರಿಂದ ಬೆಳೆ ನಾಶವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ತಕ್ಷಣವೇ ಕಾಮಗಾರಿ ಮುಂದುವರಿಸಲು ಕ್ರಮವಹಿಸಬೇಕು. ಅಲ್ಲದೆ ರಣಘಟ್ಟ ಯೋಜನೆಯೂ ಸಹ ಮಂದಗತಿಯಲ್ಲಿ ನಡೆಯುತ್ತಿದೆ. ಇದರ ಕಾಮಗಾರಿಗೂ ಮುಂದಿನ ಅಧಿವೇಶನದಲ್ಲಿ ಚರ್ಚೆ ಮಾಡಲಿದ್ದೇನೆ ಎಂದರು.

ತಾಲೂಕಿನಲ್ಲಿ ಬಹುತೇಕ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದಿರುವುದು ಸಂತಸ ತಂದಿದೆ. ಮತ್ತು ಏತ ನೀರಾವರಿ ಮೂಲಕ ಹಳೇಬೀಡು-ಮಾದಿಹಳ್ಳಿ ಕೆರೆಗಳಿಗೆ ನೀರು ಹರಿಸುವ ಪಂಪ್ ಮೋಟಾರ್ ಇರುವ ಬರುವ ಸ್ಥಳಕ್ಕೆ ಬರಲು ಸರಿಯಾದ ರಸ್ತೆ ಇಲ್ಲ. ರಸ್ತೆ ನಿರ್ಮಿಸಲು ಶೀಘ್ರವೇ ಕ್ರಿಯಾಯೋಜನೆ ಸಿದ್ಧಪಡಿಸಿ ಅನುದಾನ ತರುತ್ತೇನೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸುತ್ತಿದ್ದು ಎಲ್ಲರ ಸಹಕಾರದಿಂದ ಉತ್ತಮ ಕೆಲಸಗಳನ್ನು ಮಾಡಲಿದ್ದೇನೆ ಎಂದರು.

ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರಕೃತಿ ಪ್ರತಿವರ್ಷ ನಮಗೆ ಪಾಠ ಕಲಿಸುತ್ತಿದೆ. ಈ ಬಾರಿ ಬೇಲೂರು ಮತ್ತು ಹಳೇಬೀಡಿನಲ್ಲಿ ಮಳೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಕ್ಷೇತ್ರದ ಜಾವಗಲ್ ಭಾಗದಲ್ಲಿ ಇನ್ನೂ ಹಲವಾರು ಕೆರೆಗಳನ್ನು ತುಂಬಿಸಬೇಕಿದೆ. ಆದರೆ ಹಾಲ್ತೊರೆಯಲ್ಲಿರುವ ಮೋಟಾರ್ ಪಂಪ್‌ಗಳನ್ನು ಸರಿಯಾಗಿ ಇಟ್ಟುಕೊಳ್ಳುವುದಕ್ಕೆ ಅಧಿಕಾರಿಗಳು ಮುಂದಾಗಬೇಕು.

ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಆನಂದ್, ರೈತ ಸಂಘದ ಮುಖಂಡರಾದ ಕೆ.ಪಿ.ಕುಮಾರ್, ಮುಖಂಡರಾದ ವಿಜಯಕುಮಾರ್, ಡಿಶಾಂತ್, ಸೋಮಣ್ಣ, ಪರಮೇಶ್ ಯಗಚಿ ನೀರಾವರಿ ನಿಗಮದ ಎಇಇ ದಯಾನಂದ್, ಎಇ ಪ್ರವೀಣ್, ನವೀನ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net