

ಶ್ರೀರಂಗಪಟ್ಟಣ: ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ಕಡೆ ಭಾಗದ ಜಮೀನುಗಳಿಗೆ ನೀರು ತಲುಪಲು ಉಪ ಹಾಗೂ ಸಂಪರ್ಕ ನಾಲೆಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ರೈತರ ಬೆಳೆ ಉಳಿವಿಗೆ ವಾರಗಳ ಕಾಲ ಎಲ್ಲ ನಾಲೆಗಳಿಗೆ ನೀರು ಹರಿಸಲು ಸರ್ಕಾರದಿಂದ ಕ್ರಮ ವಹಿಸಲಾಗುತ್ತದೆ ಎಂದು ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭರವಸೆ ನೀಡಿದರು.
ತಾಲೂಕಿನ ಅರಕೆರೆ ಹಾಗೂ ನೇರಳೆಕೆರೆ ಗ್ರಾಮಗಳಲ್ಲಿ ಮಂಗಳವಾರ ಕೋಟ್ಯಂತರ ರೂ. ವೆಚ್ಚದಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರದ ಶಾಸಕನಾದರೂ ನಾನೂ ಒಬ್ಬ ರೈತನೇ. ಜೂನ್‌ನಲ್ಲಿ ನಾಲೆಗಳಿಗೆ ನೀರು ಹರಿಸುವ ಅವಕಾಶ ಇರಲಿಲ್ಲ, ಈಗಾಗಲೇ ನಾಲೆಗಳಿಗೆ 5 ಕಟ್ಟು ನೀರು ಹರಿಸಲಾಗಿದ್ದು, ಜತೆಗೆ ವ್ಯಾಪಕವಾಗಿ ಮಳೆ ಸಹ ಆಗುತ್ತಿದೆ. ಒಂದು ವೇಳೆ ಮಳೆ ಆಗದೆ ಜಲಾಶಯ ತುಂಬದಿದ್ದರೇ ಏನಾಗುತ್ತಿತ್ತು? ನಾಲೆಗಳಿಗೆ ನೀರು ಹರಿಸಬಾರದು ಎಂಬುದು ನಮ್ಮ ಉದ್ದೇಶವಲ್ಲ, ಆದರೆ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತಾಪಿ ಜನರ ಕೃಷಿಗೆ ಕಡೆ ಭಾಗದವರೆಗೂ ನೀರು ತಲುಪಿಸಲು ಮತ್ತು ಕೆರೆ-ಕಟ್ಟೆಗಳ ತುಂಬಿಸಲು ಸರ್ಕಾರದಿಂದ 100 ಕೋಟಿ ರೂ. ಅನುದಾನ ತಂದು ಪ್ರಸ್ತುತ ಉಪ ಹಾಗೂ ಸಂಪರ್ಕ ನಾಲೆಗಳ ದುರಸ್ಥಿ ಕಾಮಗಾರಿ ನಡೆಸಲಾಗುತ್ತಿದ್ದು, ವಿತರಣಾ ಗೇಟ್‌ಗಳನ್ನು ತೆರವು ಮಾಡಲಾಗಿದೆ. ಇದು ನಮ್ಮ ರೈತರು ಹಾಗೂ ಕೃಷಿಯ ಅನೂಕೂಲಕ್ಕೆ ನಡೆಸುತ್ತಿರುವ ಗುಣಮಟ್ಟದ ಕಾಮಗಾರಿಯಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ರೈತರು ಸಹ ಯಾವ ಒತ್ತಡ ಹಾಕದೆ ಅರ್ಥಮಾಡಿಕೊಂಡು ಮಳೆಗಾಲ ಪ್ರಾರಂಭವಾಗುವ ಮೊದಲೇ ಈ ಕಾಮಗಾರಿ ಪೂರ್ಣಗೊಳಿಸಲು ಅವಕಾಶಮಾಡಿಕೊಡಬೇಕು. ಇಷ್ಟಿದ್ದರೂ ಒಂದು ವಾರಗಳ ಕಾಲ ನಾಲೆಗಳಿಗೆ ನೀರು ಹರಿಸಲಾಗುವುದು ಎಂದರು.
ತಾಲೂಕಿನ ಅರಕೆರೆ ವ್ಯಾಪ್ತಿಯ ಒಳಭಾಗದಲ್ಲಿನ ರಸ್ತೆಗಳನ್ನು ಸುಮಾರು 3 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಗ್ರಾಮಸ್ಥರ ಸಂಚಾರ ಅನುಕೂಲತೆಗೆ ಒತ್ತು ನೀಡಲಾಗಿದೆ. ಇದರೊಂದಿಗೆ ಯಾಚೇನಹಳ್ಳಿಯಿಂದ ನೇರಳೆಕೆರೆ ಗ್ರಾಮಕ್ಕೆ ಸಂಪರ್ಕ ನೀಡುವ ಸುಲ್ತಾನ್ ರಸ್ತೆ ನಿತ್ಯ ಸಾವಿರಾರು ಜನರು ಸಂಚರಿಸುವ ಮುಖ್ಯರಸ್ತೆಯಾಗಿದ್ದು, ಬಹಳ ವರ್ಷಗಳಿಂದ ಹದಗೆಟ್ಟಿದ್ದ ಈ ರಸ್ತೆಯನ್ನು 2 ಕೋಟಿ ರೂ.ವೆಚ್ಚದಲ್ಲಿ ದುರಸ್ತಿಯೊಂದಿಗೆ ಅಭಿವೃದ್ಧಿಪಡಿಸಲು ಚಾಲನೆ ನೀಡಲಾಗಿದೆ. ನೇರಳೆಕೆರೆ ಭಾಗದ ಮರಿಯಯ್ಯನ ಕೆರೆಗೆ ನೀರು ತುಂಬಿಸಲು ಏತ ನೀರಾವರಿ ಮೂಲಕ ನೀರು ತುಂಬಿಸಲು ಕ್ರಮವಹಿಸಲಾಗಿದ್ದು,ಶೀಘ್ರ ಟೆಂಡರ್ ಕರೆದು ಕಾಲುವೆಗಳ ವಿಸ್ತರಣೆ ಮೂಲಕ ನೀರು ತುಂಬಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಇದೇ ವೇಳೆ ನೇರಳೆಕೆರೆ ಗ್ರಾಮದ ಸರ್ಕಾರಿ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ನೋಟ್ ಬುಕ್ ಹಾಗೂ ಪಠ್ಯ ಪುಸ್ತಕಗಳನ್ನು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ವಿತರಿಸಿದರು.
ಯಾಚೇನಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಪೀಠಾಧಿಪತಿ ಶ್ರೀನಾದಾನಂದನಾಥ ಸ್ವಾಮೀಜಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪಟೇಲ್ ಸುರೇಶ್, ಅರಕೆರೆ ಸಂತೋಷ್, ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಗಾಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್, ಮಾಜಿ ಅಧ್ಯಕ್ಷ ರಮೇಶ್, ಸದಸ್ಯ ವೆಂಕಟೇಶ್, ಮುಖಂಡರಾದ ಶಶಾಂಕ್, ಅಪೆಕ್ಸ್ ಮಾಜಿ ನಿರ್ದೇಶಕ ಶಿವಯ್ಯ, ಎಪಿಎಂಸಿ ಮಾಜಿ ಉಪಾಧ್ಯಕ್ಷ ನಿಂಗರಾಜು, ಅರಕೆರೆ ಭವಾನಿ ರವಿ, ದಿವಾಕರ್, ಗಾಮನಹಳ್ಳಿ ಮಹೇಶ್, ತಾಪಂ ಇಒ ವೇಣು, ಲೋಕೋಪಯೋಗಿ ಇಲಾಖೆ ಎಇಇ ಜಸ್ವಂತ್ ಪಂಡಿತ್, ಬಿಇಒ ಆರ್.ಪಿ.ಮಹೇಶ್ ಇತರರು ಉಪಸ್ಥಿತರಿದ್ದರು.