

ಕಾರ್ಕಳ: ಕಳೆದೆರಡು ದಿನಗಳಿಂದ ದಿನಪೂರ್ತಿ ಕಾರ್ಕಳ ತಾಲೂಕಾದ್ಯಂತ ಉತ್ತಮ ಗಾಳಿ ಮಳೆಯಾಗಿದ್ದು, ಕೆಲವೊಂದು ಕಡೆಗಳಲ್ಲಿ ಹಾನಿಯಾಗಿವೆ.
ಮಿಯ್ಯರು ಗ್ರಾಮದ ಜೋಡುಕಟ್ಟೆ ನಿವಾಸಿ ಜನಾರ್ದನ ಭಟ್ ಅವರ ಮನೆಯ ಮೇಲೆ ಶುಕ್ರವಾರ ಸುರಿದ ಭಾರಿ ಗಾಳಿ ಮಳೆಗೆ ಮರ ಬಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ನಿಟ್ಟೆ ಗ್ರಾಮದ ಬಜಕಳ ಎಂಬಲ್ಲಿ ಗಾಳಿಯ ರಭಸಕ್ಕೆ ಕರುಣಾಕರ ಶೆಟ್ಟಿ ಎಂಬುವರ ಮನೆ ಹಾಗೂ ಕೊಟ್ಟಿಗೆಯ ಹೆಂಚು ಹಾರಿ ಹೋಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಗ್ರಾಮಕರಣಿಕರು ಭೇಟಿ ನೀಡಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ತಾಲೂಕಾದ್ಯಂತ ವಾರಾಹಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ಗ್ರಾಮಗಳ ರಸ್ತೆ ಬದಿಯ ಚರಂಡಿಯಲ್ಲಿ ಮಣ್ಣು ತುಂಬಿದ ಪರಿಣಾಮ ಎಲ್ಲ ಕಡೆ ಚರಂಡಿಯೇ ಮಾಯವಾಗಿದೆ. ಇದೀಗ ವಿಪರೀತ ಮಳೆಯಿಂದ ಮಳೆ ನೀರು ಸರಿಯಾಗಿ ಹರಿದು ಹೋಗಲು ಸಾಧ್ಯವಾಗದೆ ರಸ್ತೆಗಳಲ್ಲಿ ಕೃತಕ ನೆರೆ ಉಂಟಾಗುವಂತಾಗಿದೆ. ಚರಂಡಿಯಲ್ಲಿ ಹರಿಯಬೇಕಾಗಿದ್ದ ಮಳೆ ನೀರು ರಸ್ತೆಯಲ್ಲೇ ಹರಿದಾಡುತ್ತಿದ್ದು, ವಾಹನ ಸವಾರರ ಸಹಿತ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ.