ಶಿರ್ವ: ಸೇನೆಯಲ್ಲಿ ಕರ್ತವ್ಯದಲ್ಲಿದ್ದ ಬೆಳ್ಳೆ ಗ್ರಾಪಂ ವ್ಯಾಪ್ತಿಯ ಕುಂತಳನಗರ ನಿವಾಸಿ ಮೊಹಮ್ಮದ್ ಸಲೀಂ(35) ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.
ಭೂಸೇನೆಯ 196 ಆರ್ಟಿ ರೆಜಿಮೆಂಟ್‌ನ ಜಮ್ಮು-ಕಾಶ್ಮೀರ, ದೆಹಲಿ ಮತ್ತು ಸಿಕಂದರಾಬಾದ್‌ನಲ್ಲಿ 14 ವರ್ಷಗಳಿಂದ ಸೇವೆಯಲ್ಲಿದ್ದು, ಪ್ರಸ್ತುತ ಹರ್ಯಾಣದಲ್ಲಿ ಕರ್ತವ್ಯದಲ್ಲಿದ್ದರು. ಕಿಡ್ನಿ ವೈಫಲ್ಯದಿಂದ ಅನಾರೋಗ್ಯಕ್ಕೆ ತುತ್ತಾದ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ತಾಯಿ ಮತ್ತು ಪತ್ನಿ ಕಿಡ್ನಿ ದಾನ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಕಾಪು ತಹಸೀಲ್ದಾರ್ ಡಾ.ಪ್ರತಿಭಾ ಆರ್. ಶನಿವಾರ ಮೃತರ ಮನೆಗೆ ಭೇಟಿ ನೀಡಿ ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಒಂದೇ ಕುಟುಂಬದಲ್ಲಿ ಮೂವರು ಯೋಧರು
ಮಣಿಪುರ ದೆಂದೂರುಕಟ್ಟೆ ನಿವಾಸಿ ಮೊಹಮ್ಮದ್ ಹಂಝಾ ಕೋಯಾ ಇವರ ಏಳು ಪುತ್ರರಲ್ಲಿ ಮೂವರು ಯೋಧರು. ಮೊಹಮ್ಮದ್ ಸಲೀಂ ಯೋಧರಾಗಿ ಹರ್ಯಾಣದಲ್ಲಿ ಸೇವೆಯಲ್ಲಿದ್ದು ನಿಧನರಾಗಿದ್ದು, ಮೊಹಮ್ಮದ್ ಬುಹ್ರಾನ್ ಸೇನೆಯ ಪಂಜಾಬ್ ತುಕುಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೊಬ್ಬ ಪುತ್ರ ಮೊಹಮ್ಮದ್ ಅಫಾನ್ ಸೇನೆಗೆ ಆಯ್ಕೆಯಾಗಿದ್ದು, ದೆಹಲಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಶನಿವಾರ ಸಕಲ ಸರ್ಕಾರಿ, ಮಿಲಿಟರಿ ಗೌರವದೊಂದಿಗೆ ಮಣಿಪುರ ಖಬರಸ್ತಾನದಲ್ಲಿ ಯೋಧ ಮೊಹಮ್ಮದ್ ಸಲೀಮ್ ಅವರ ಅಂತ್ಯ ಸಂಸ್ಕಾರ ನಡೆಯಿತು.