

ಕುದೂರು: ಪಟ್ಟಣ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಎರಡು ಗಂಟೆ ಭರ್ಜರಿ ಮಳೆ ಸುರಿಯಿತು.
ಇನ್ನು ಸಂಜೆ ಮಳೆಯಿಂದಾಗಿ ಶಾಲಾ&ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳಿದ್ದ ನೌಕರರು, ಸಾರ್ವಜನಿಕರು ಮನೆ ತಲುಪಲು ಪರದಾಡಿದರು. ಸಂತೆ ಹಾಗೂ ಬೀದಿಬದಿ ವ್ಯಾಪಾರಿಗಳು ವ್ಯಾಪಾರವಿಲ್ಲದೆ ನಷ್ಟ ಅನುಭವಿಸಿದರು. ಶಿವಗಂಗೆ ಹಾಗೂ ಸೋಲೂರು ಮುಖ್ಯ ರಸ್ತೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿ ಹರಿದು ಗುಂಡಿಗಳು ನೀರಿನಿಂದ ತುಂಬಿದ್ದರಿಂದ ಸಂಚಾರಕ್ಕೆ ತೊಡಕು ಉಂಟಾಯಿತು. ಇನ್ನು ಪಟ್ಟಣದ ಹೃದಯ ಭಾಗದಲ್ಲಿ ನಡೆಯುತ್ತಿರುವ ಹೈಟೆಕ್ ಕ್ರೀಡಾಂಗಣ ಕಾಮಗಾರಿಯ ಸ್ಥಳದಲ್ಲಿ ಶೇಖರಣೆಯಾಗಿದ್ದ ನೀರನ್ನು ಏಕಾಏಕಿ ತೆರವು ಮಾಡಿದ್ದರಿಂದ ಬಸ್ ನಿಲ್ದಾಣ ಸೇರಿ ಮುಖ್ಯರಸ್ತೆಯಲ್ಲಿ ನೀರು ನದಿಯಂತೆ ಹರಿಯಿತು. ಇದರ ಪರಿಣಾಮ ಮುಖ್ಯರಸ್ತೆಯ ಕೆಲ ಅಂಗಡಿಗಳಿಗೆ ನೀರು ನುಗ್ಗಿತು. ಪರಿಣಾಮ ಗ್ರಾಹಕರು, ಅಂಗಡಿ ವರ್ತಕರು ಅಧಿಕಾರಿಗಳನ್ನು ಶಪಿಸಿದರು.
ಸೂಕ್ತ ಮುಂಜಾಗ್ರತೆ ವಹಿಸದೆ, ನೀರು ಹರಿದು ಹೋಗಲು ವ್ಯವಸ್ಥೆ ಮಾಡದೆ, ಮಳೆಗಾಲದಲ್ಲಿ ಕಾಮಗಾರಿ ಮಾಡುವಾಗ ಸಾರ್ವಜನಿಕರಿಗೆ ತೊಂದರೆ ಮಾಡುವುದು ಎಷ್ಟು ಸರಿ? ಅದರಲ್ಲೂ ಹಬ್ಬದ ಸಂದರ್ಭಗಳಲ್ಲಿ ಈ ರೀತಿಯಾದರೆ ನಮಗೆ ವ್ಯಾಪಾರ ಆಗೋದಾದರೂ ಹೇಗೆ ಎಂದು ಅಂಗಡಿಯೊಂದರ ಮಾಲೀಕ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಟನೆ ಕುರಿತು ಮಾಗಡಿ ಲೋಕೋಪಯೋಗಿ ಇಲಾಖೆ ಎಇಇ ಪುಟ್ಟಹನುಮಂತರಾಜು ಮಾತನಾಡಿ, ನಾಳೆಯೇ ಇಂಜಿನಿಯರ್ರನ್ನು ಸ್ಥಳಕ್ಕೆ ಕಳುಹಿಸಿ, ನೀರು ಹರಿದು ಹೋಗಲು ಕ್ರಮವಹಿಸುವುದಾಗಿ ಸೂಚಿಸಿದರು.