ಜಲ ತಜ್ಞ ಅಯ್ಯಪ್ಪ ಮಸಗಿ ನಿಧನ

y
Published on

ಬೆಂಗಳೂರು: ಜಲ ಸಂತ ಎಂದೇ ಖ್ಯಾತರಾಗಿದ್ದ ಜಲಮರುಪೂರಣ ತಜ್ಞ ಅಯ್ಯಪ್ಪ ಮಸಗಿ (67) ಗುರುವಾರ ಹೃದಯಾಘಾತದಿಂದ ನಿಧನರಾದರು.

ನಗರದ ಏರ್‌ಪೋರ್ಟ್ ರಸ್ತೆಯ ಬ್ಯಾಟರಾಯನಪುರದ ಅಮೃತಹಳ್ಳಿಯ ನಿವಾಸದಲ್ಲಿ ಸಂಜೆ ದಿಢೀರ್ ಅಸ್ವಸ್ಥರಾದ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದರು ಎಂದು ವೈದ್ಯರು ದೃಢಪಡಿಸಿದರು. ಮೃತರು ಪತ್ನಿ ಶಾರದಾದೇವಿ, ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ನಾಡಿನ ಉದ್ದಗಲಕ್ಕೂ ಬೋರ್‌ವೆಲ್ ರೀಚಾರ್ಜ್ ಮಾಡಲು ವಿಶೇಷ ರೀತಿಯಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿ ಜಲ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದ್ದರು. ಕರ್ನಾಟಕ, ಆಂಧ್ರ, ರಾಜಸ್ಥಾನ ಸೇರಿ ಹಲವು ರಾಜ್ಯ ಸರ್ಕಾರಗಳ ಇಲಾಖೆಗಳಲ್ಲಿ ಜಲ ಸಂರಕ್ಷಣೆ ಕಾರ್ಯಕ್ರಮದಲ್ಲಿ ಸಲಹೆಗಾರರಾಗಿ ಕೆಲಸ ನಿರ್ವಹಿಸಿದ್ದರು.

ಮೂಲತಃ ಮೆಕಾನಿಕಲ್ ಇಂಜಿನಿಯರ್ ಆಗಿದ್ದ ಅಯ್ಯಪ್ಪ ಮಸಗಿ ಅವರು ಎಲ್ ಆ್ಯಂಡ್ ಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಬಳಿಕ ಅವರು ತಮ್ಮದೇ ಜಲ ಸಾಕ್ಷರತಾ ಪ್ರತಿಷ್ಠಾನ ಹೆಸರಿನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಸಲಹೆ-ಸೂಚನೆ ನೀಡುತ್ತಿದ್ದ ಅವರು, ನಿರಂತರವಾಗಿ ಜನಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು.

ಶುಕ್ರವಾರ ಅಂತ್ಯಕ್ರಿಯೆ: ಮೃತರ ಅಂತ್ಯಕ್ರಿಯೆ ಅವರ ಕರ್ಮಭೂಮಿಯಾಗಿರುವ ಕೊರಟಗೆರೆ ತಾಲೂಕಿನ ಹೊಲವನಹಳ್ಳಿ ಜಮೀನಿನಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ನೆರವೇರಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net