

ವಿಜಯವಾಣಿ ಸುದ್ದಿಜಾಲ ಆರ್ಡಿ
ಸಿದ್ದಾಪುರ, ಆರ್ಡಿ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಭಾನುವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಗದ್ದೆ, ಹಳ್ಳ, ಕೆರೆ, ಮದಗ, ಹೊಳೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ.
ಸಿದ್ದಾಪುರ ಸುತ್ತಮುತ್ತ ಕೆಲವು ದಿನಗಳ ಹಿಂದೆ ಮಳೆ ಪ್ರವಾಣ ಕಡಿಮೆಯಾದ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದರು. ಈಗ ಮತ್ತೆ ಮಳೆ ಶುರುವಾಗಿದ್ದರಿಂದ ತಗ್ಗುಪ್ರದೇಶದ ಭತ್ತದ ಗದ್ದೆಗಳಲ್ಲಿ ನೀರು ತುಂಬಿ, ಕೃಷಿ ಕಾರ್ಯಕ್ಕೆ ತೊಡಕಾಗಿದೆ.
ವಾರಾಹಿ ನದಿ ಮಟ್ಟ ಏರಿಕೆ: ಹಾಲಾಡಿ ಸಮೀಪದ ವಾರಾಹಿ ನದಿಯಲ್ಲಿ ಸೋಮವಾರ ಬೆಳಗ್ಗೆಯಿಂದ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಪಶ್ಚಿಮ ಟ್ಟದ ತಪ್ಪಲು ಪ್ರದೇಶಗಳಲ್ಲಿ ಹುಟ್ಟಿ ಹರಿಯುವ ಕುಬ್ಜಾ, ಶಂಕರನಾರಾಯಣ, ತೊಂಭತ್ತು, ಮಡಾಮಕ್ಕಿ, ಕುಂಟಹೊಳೆ, ಆವರ್ಸೆ ಸಮೀಪದ ಆನೆಗುಂಡಿ ಸೇರಿದಂತೆ ಸುತ್ತಮುತ್ತಲಿನ ಭಾಗಗಳ ಹೊಳೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.