

ಯಳಂದೂರು: ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಜೋರು ಮಳೆಗೆ ಕೆಸ್ತೂರು ಹಾಗೂ ಕೆ.ಹೊಸೂರು ಗ್ರಾಮಗಳಲ್ಲಿನ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಗ್ರಾಮಗಳಲ್ಲಿ ಉಪ್ಪಾರ ಹಾಗೂ ನಾಯಕ ಜನಾಂಗಗಳು ವಾಸಿಸುವ ಬೀದಿಗಳು ತಗ್ಗು ಪ್ರದೇಶದಲ್ಲಿವೆ. ಹಾಗಾಗಿ ಮನೆಗಳಿಗೆ ಮಳೆಯಿಂದ ನೀರು ನುಗ್ಗಿದ ಪರಿಣಾಮ ರಾತ್ರಿ ಪೂರ್ತಿ ಜಾಗರಣೆ ಮಾಡುವಂತಾಯಿತು. ಜತೆಗೆ ಮನೆಗಳಲ್ಲಿದ್ದ ವಸ್ತುಗಳು, ದಿನಸಿ ಪದಾರ್ಥಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಭಾರಿ ಮಳೆಗೆ ಕೆಸ್ತೂರು ಗ್ರಾಮದ ಕೆರೆ ತುಂಬಿ ಕೋಡಿ ಬಿದ್ದಿದೆ. ಅಲ್ಲದೆ ರಾಜಕಾಲುವೆಯಲ್ಲಿ ಹರಿದ ನೀರಿಗೆ, ಈ ಗ್ರಾಮದ ಉಪ್ಪಾರ ಬಡಾವಣೆಯ ನಾಗರಾಜು, ಗೆಜಶೆಟ್ಟಿ, ಯಶೋದಮ್ಮ ಅವರ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಜಾನುವಾರುಗಳು ಕಟ್ಟುವ ಕೊಟ್ಟಿಗೆಗಳಿಗೂ ನೀರು ನುಗ್ಗಿದ್ದು ಇದರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಿದೆ. ಹಾಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.