ಮುದ್ದಲಪಲ್ಲಿಯಲ್ಲಿ ನೀರಿಗಾಗಿ ಹಾಹಾಕಾರ

WEB 3
Published on

ಖಾಲಿ ಕೊಡ ಹಿಡಿದು ಮಹಿಳೆಯರ ಆಕ್ರೋಶ ಖಾಸಗಿ ಕೊಳವೆಬಾವಿ ಆಶ್ರಯಿಸುವ ದುಸ್ಥಿತಿ

ಬಾಗೇಪಲ್ಲಿ: ತಾಲೂಕು ಕೇಂದ್ರಕ್ಕೆ ಕೂಗಳತೆ ದೂರದಲ್ಲಿರುವ ಮುದ್ದಲಪಲ್ಲಿ ಗ್ರಾಮದಲ್ಲಿ ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ನಿತ್ಯ ಪರದಾಡುತ್ತಿದ್ದರೂ ಮೂಲಸೌಕರ್ಯ ಕಲ್ಪಿಸಬೇಕಾಗಿರುವ ತಾಲೂಕು ಆಡಳಿತ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಗ್ರಾಮದ ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ ಜನಪ್ರತಿನಿಧಿಗಳ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ದೇವರಗುಡಿಪಲ್ಲಿ ಗ್ರಾಪಂನ ಮದ್ದಲಪಲ್ಲಿ ಗಾಮದಲ್ಲಿ ಕಳೆದ 20 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಕೊಳವೆಬಾವಿಯಲ್ಲಿ ನೀರಿದ್ದರೂ ಸ್ಥಳೀಯ ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ ಎಂದು ಗ್ರಾಮದ ಮಹಿಳೆಯರು ಬೇಸರ ವ್ಯಕ್ತಪಡಿಸಿದರು. ಜನ, ಜಾನುವಾರಿಗಳಿಗೆ ನೀರಿಲ್ಲದೆ ಕುಡಿಯುವ ನೀರಿಗಾಗಿ ಗ್ರಾಮದ ಹೊರವಲಯದಲ್ಲಿರುವ ಖಾಸಗಿ ಕೊಳವೆಬಾವಿಗಳನ್ನು ಆಶ್ರಯಿಸುವ ದುಸ್ಥಿತಿ ನಿರ್ಮಾಣವಾಗಿದೆ. ಲೋಡ್ ಶೆಡ್ಡಿಂಗ್ ಸಮಸ್ಯೆ ಎದುರಿಸುತ್ತಿರುವ ರೈತರು ಮಹಿಳೆಯರನ್ನು ಖಾಸಗಿ ಕೊಳವೆಬಾವಿಗಳತ್ತ ಬರದಂತೆ ಎಚ್ಚರಿಕೆ ನೀಡುತ್ತಿದ್ದರೂ ಬೇರೆ ದಾರಿ ಕಾಣದೆ ಮಹಿಳೆಯರು ಹೇಗೋ ನೀರು ತುಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೇಸಿಗೆ ಪ್ರಾರಂಭದಲ್ಲೇ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದರೂ ಜಿಲ್ಲಾ ಹಾಗೂ ತಾಲೂಕು ಆಡಳಿತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಂಡಿಲ್ಲ.

ಇಂದ್ರಮ್ಮ, ಶಾಂತಮ್ಮ, ಗಂಗುಲಮ್ಮ, ಮಮತ, ನಾಗಮಣಿ, ಅಲಿವೇಲಮ್ಮ, ಅರುಣಾ, ಮಂಜುಳ, ಅಕ್ಕಮ್ಮ, ಅಶ್ವತ್ಥಪ್ಪ, ಈಶ್ವರ, ಮಂಜುನಾಥ, ಪ್ರಕಾಶ್, ವೆಂಕಟೇಶಪ್ಪ ಮತ್ತಿತರರು ಇದ್ದರು.

"ಗ್ರಾಮದಲ್ಲಿ ಕುಡಿಯಲು ನೀರು ಇಲ್ಲ ಎಂದು ತಿಳಿಸಿದರೂ ಗ್ರಾಪಂ ಅಧಿಕಾರಿಗಳು ಉಡಾೆ ತೋರುತ್ತಿದ್ದಾರೆ. ಖಾಸಗಿ ಕೊಳವೆಬಾವಿಯಿಂದ ನೀರು ತರುತ್ತಿದ್ದೇವೆ. ಗ್ರಾಮದ ಪ್ರತಿ ಮನೆಯಲ್ಲೂ ಸೀಮೆ ಹಸು, ಎಮ್ಮೆಗಳಿವೆ. ಜನ, ಜಾನುವಾರುಗಳಿಗೂ ನೀರಿಲ್ಲದಂತಾಗೊದೆ." - ಪದ್ಮಾವತಿ, ಮುದ್ದಲಪಲ್ಲಿ ಗ್ರಾಮ. "ಗ್ರಾಮದಲ್ಲಿರುವ ಸಾರ್ವಜನಿಕ ಕೊಳವೆಬಾವಿಯ ಪೈಪ್‌ಲೈನ್ ದುರಸ್ತಿಯಾಗಿದ್ದು, ಕಳೆದ 20 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗಿಲ್ಲ. ನೀರಿನ ಸಮಸ್ಯೆ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸಂಬಂಧಪಟ್ಟ ಇಲಾಖೆ ಮೇಲಧಿಕಾರಿಗಳು ಇತ್ತ ಗಮನ ಹರಿಸಿ ನೀರಿನ ಸಮಸ್ಯೆಬಗೆಹರಿಸಬೇಕಿದೆ." - ಆರ್.ಜಯಂತ್, ಮುದ್ದಲಪಲ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net