

* ಚನ್ನಪಟ್ಟಣ ನಗರಸಭೆಯಿಂದಲೇ ರವಾನೆ
*ಕೆರೆಯಂಗಳಕ್ಕೆ ವಿಷ ಹಾಕುವ ಕೆಲಸ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಎಲ್ಲೆಂದರಲ್ಲಿ ಕಸ ಹಾಕಬೇಡಿ.., ಸ್ವಚ್ಛತೆ ಕಾಪಾಡಿ ಎನ್ನುವ ಸ್ಲೋಗನ್ ಜಪಿಸುವ ಚನ್ನಪಟ್ಟಣ ನಗರಸಭೆಯೇ ಕೆರೆಯ ಒಡಲಿಗೆ ತ್ಯಾಜ್ಯ ಸುರಿಯುವ ಮೂಲಕ ತನ್ನದು ಪರಿಸರದ ಬಗ್ಗೆ ಕೇವಲ ಹುಸಿಪ್ರೇಮ ಎಂಬುದನ್ನು ನಿರೂಪಿಸಿದೆ.
ಹೌದು.., ನಗರಕ್ಕೆ ಹೊಂದಿಕೊಂಡಿರುವ ತಿಟ್ಟಮಾರನಹಳ್ಳಿ ರಾಮಮ್ಮನ ಕೆರೆಯ ಬಳಿ ನಗರಸಭೆಯಿಂದ ಕೆಲದಿನಗಳಿಂದ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ವಾಹನದಲ್ಲಿ ತಂದು ರಾಮಮ್ಮನ ಕೆರೆಯ ಬಳಿ ಹಾಕಿ ಮಣ್ಣು ಮುಚ್ಚುವ ಮೂಲಕ ತನ್ನ ತ್ಯಾಜ್ಯ ವಿಲೇವಾರಿ ಕರ್ತವ್ಯದಿಂದ ಕೈ ತೊಳೆದುಕೊಳ್ಳುವ ಕೆಲಸ ಮಾಡುತ್ತಿದೆ. ಕೆರೆ ಹಾಗೂ ರೈಲ್ವೆ ಹಳಿ ಮಧ್ಯದಲ್ಲಿರುವ ಜಾಗದಲ್ಲಿ ಕೆಲದಿನಗಳಿಂದ ನಿರಂತರವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ಈ ಮೂಲಕ ಕೆರೆಯಂಗಳಕ್ಕೆ ವಿಷ ಹಾಕುವ ಕೆಲಸ ಮಾಡುತ್ತಿದೆ.
ಕೆರೆ ಅಂಗಳ ಮತ್ತು ನೀರಿನ ಮೂಲಗಳ ಬಳಿ ಕಸ ವಿಲೇವಾರಿ ಮಾಡಬಾರದೆಂಬ ನಿಯಮವಿದೆ. ಆದರೂ, ಈ ಬಗ್ಗೆ ಜಾಣಕುರುಡುತನ ಪ್ರದರ್ಶಿಸುತ್ತಿರುವ ನಗರಸಭೆ ಅಧಿಕಾರಿಗಳು, ಕಸ ವಿಲೇವಾರಿಯಾದರೆ ಸಾಕು, ಜಾಗ ಯಾವುದಾದರೇನು? ಎಂಬ ನೀತಿಗೆ ಅಂಟಿಕೊಂಡವರಂತೆ ವರ್ತಿಸುತ್ತಿದ್ದಾರೆ. ಕಸ ವಿಲೇವಾರಿ ಎಂಬ ಜವಾಬ್ದಾರಿಯನ್ನು ನಿಭಾಯಿಸಲು, ಜಾಗಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ ತಮ್ಮ ಬೇಜವಾಬ್ದಾರಿ ಮೆರೆಯುತ್ತಿದ್ದಾರೆ.
ರಾಮಮ್ಮನ ಕೆರೆ ದಡದಲ್ಲಿ ಈ ಹಿಂದಿನ ಹಳೆ ರಸ್ತೆ (ಆರ್.ಕೆ.ಗೇಟ್) ಇದ್ದು ಈ ರಸ್ತೆಯನ್ನು ಹಲವು ವರ್ಷದ ಹಿಂದೆಯೇ ಬಂದ್ ಮಾಡಲಾಗಿದೆ. ಸದ್ಯ ಇದೊಂದು ರ್ನಿಜನ ಪ್ರದೇಶವಾಗಿದ್ದು, ಈ ಪರಿಸ್ಥಿತಿಯ ಲಾಭ ಪಡೆದುಕೊಂಡು ಕೆರೆಯ ಪಕ್ಕ ಇರುವ ಹಳ್ಳಕ್ಕೆ ತ್ಯಾಜ್ಯ ಸುರಿಯುವ ಕೆಲಸ ಮಾಡಲಾಗುತ್ತಿದೆ. ತ್ಯಾಜ್ಯಕ್ಕೆ ಬೆಂಕಿ ಹಚ್ವುವ ಹಿನ್ನೆಲೆಯಲ್ಲಿ ಕೆರೆ ಏರಿ ಮೇಲೆ ಓಡಾಡುವ ಸಾರ್ವಜನಿಕರು ಹಾಗೂ ರೈಲ್ವೆ ಹಳಿ ಪಕ್ಕ ಇರುವ ಕೋಟೆ ನಿವಾಸಿಗಳಿಗೂ ಆತಂಕ ಸೃಷ್ಟಿಯಾಗಿದೆ. ಜನರ ಆರೋಗ್ಯ ಕಾಪಾಡಬೇಕಾದ ಜವಾಬ್ದಾರಿ ಇರುವ ನಗರಸಭೆಯೇ ಕೆರೆಯ ಒಡಲಿಗೆ ತ್ಯಾಜ್ಯ ಸುರಿಯುತ್ತಿರುವುದು ಮಾತ್ರ ವಿಪರ್ಯಾಸದ ಸಂಗತಿ.
ನೀರಿನ ಮೂಲಗಳ ಬಳಿ ನಗರಸಭೆಯಿಂದಲೇ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕಣ್ವನದಿಯ ದಡದಲ್ಲೂ ತ್ಯಾಜ್ಯ ವಿಲೇವಾರಿ ಮಾಡಿರುವ ಉದಾಹರಣೆ ಇದೆ. ತ್ಯಾಜ್ಯ ವಿಲೇವಾರಿಗೆ ನಗರಸಭೆಗೆ ಜಾಗವಿಲ್ಲದ ಹಿನ್ನೆಲೆಯಲ್ಲಿ ಸಿಕ್ಕ ಜಾಗದಲ್ಲಿ ವಿಲೇವಾರಿ ಮಾಡುವುದನ್ನು ನಗರಸಭೆ ಈ ಹಿಂದಿನಿಂದಲೂ ರೂಢಿಸಿಕೊಂಡಿದೆ.
ಈಗಾಗಲೇ ಖಾಸಗಿ ಜಾಗಗಳನ್ನು ಬಾಡಿಗೆಗೆ ಪಡೆದು ಸಾಕಷ್ಟು ಕಡೆ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ. ಇದೀಗ, ನಗರಕ್ಕೆ ಹೊಂದಿಕೊಂಡಿರುವ ಕೆರೆಯ ಬಳಿಯೂ ಇವರ ಕಣ್ಣು ಬಿದ್ದಿರುವುದು ದುರಂತ. ನಗರಸಭೆಯ ಈ ನಡೆ ತಿಟ್ಟಮಾರನಹಳ್ಳಿ ಗ್ರಾಮಸ್ಥರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಿಟ್ಟಮಾರನಹಳ್ಳಿಯ ಈ ರಾಮಮ್ಮನ ಕೆರೆ ಈಗಾಗಲೇ ಸಂಪೂರ್ಣ ಕಲುಷಿತಗೊಂಡಿದೆ. ಅದಕ್ಕೂ ನಗರಸಭೆಯೇ ಕಾರಣ ಎಂಬುದು ಜಗಜ್ಜಾಹಿರು. ನಗರದ ಚರಂಡಿ ನೀರು ಹಲವು ವರ್ಷಗಳಿಂದ ಈ ಕೆರೆಯ ಒಡಲು ಸೇರುತ್ತಿದೆ. ನಗರದಲ್ಲಿ ಯುಜಿಡಿ ವ್ಯವಸ್ಥೆ ಇಲ್ಲದ ಕಾರಣ ಕಲುಷಿತ ನೀರು ಸರಾಗವಾಗಿ ಹರಿದು ಕೆರೆಯನ್ನು ಸೇರುತ್ತಿದೆ.
ಇದರಿಂದಾಗಿ, ಕೆರೆ ಸಂಪೂರ್ಣ ಮಲಿನಯುಕ್ತವಾಗಿದೆ. ಇದರ ಮಧ್ಯೆ, ಕೆರೆಯ ಬಳಿ ತ್ಯಾಜ್ಯ ಸುರಿಯುತ್ತಿರುವುದು ಜಲಮೂಲ ಇನ್ನಷ್ಟು ಕದಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಗರಸಭೆ ವಿರುದ್ಧ ದೂರು ಸಲ್ಲಿಸಲು ಜತೆಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲು ಪರಿಸರ ಪ್ರೇಮಿಗಳು ಚಿಂತನೆ ನಡೆಸಿದ್ದಾರೆ.
ಮಹೇಂದ್ರ, ನಗರಸಭೆ ಪೌರಾಯುಕ್ತ
ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಹಾಗೇನಾದರೂ ಕೆರೆಯ ಬಳಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದರೆ ತಣ ನಿಲ್ಲಿಸುತ್ತೇನೆ. ತ್ಯಾಜ್ಯ ವಿಲೇವಾರಿಯ ಬಗ್ಗೆ ಸಮಸ್ಯೆ ಇರುವುದು ನಿಜ. ಕೆಲದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಲಿದೆ.
ನಗರಸಭೆ ವತಿಯಿಂದ ನೀರಿನ ಮೂಲಗಳ ಬಳಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಕೆಲಸ ಮಾಡಲಾಗಿದೆ. ರಾಮಮ್ಮನಕೆರೆ ಬಳಿ ತ್ಯಾಜ್ಯ ಸುರಿಯುತ್ತಿರುವುದು ಅಮ್ಯ. ತ್ಯಾಜ್ಯದ ವಾಸನೆ ರಸ್ತೆಗೆ ಬಡಿಯುತ್ತಿದೆ. ನಗರಸಭೆ ವಿರುದ್ಧ ಕಾನೂನು ಹೋರಾಟ ನಡೆಸಲು ಚಿಂತಿಸುತ್ತಿದ್ದೇವೆ. ಶಶಿಧರ, ಪರಿಸರ ಪ್ರೇಮಿ.