ತ್ಯಾಜ್ಯ ವಿಲೇವಾರಿ ಹಾಟ್‌ಸ್ಪಾಟ್ ಚನ್ನಪಟ್ಟಣ ಗಲ್ಲಿಗಳು

IMG-20231208-WA0015
Published on

’ಸ್ವಚ್ಛತೆಗೆ ನಗರಸಭೆ ನಿರ್ಲಕ್ಷ್ಯ ಸಾರ್ವಜನಿಕರ ಆಕ್ರೋಶ

ಅಭಿಲಾಷ್ ತಿಟ್ಟಮಾರನಹಳ್ಳಿ, ಚನ್ನಪಟ್ಟಣ

ನಗರದ ಕನ್ಸರ್ವೆನ್ಸಿ ಗಲ್ಲಿಗಳು ತ್ಯಾಜ್ಯ ವಿಲೇವಾರಿಯ ಹಾಟ್‌ಸ್ಪಾಟಾಗಿ ಬದಲಾಗುತ್ತಿದ್ದು, ಕೆಲವೊಂದು ಕಡೆ ಒತ್ತುವರಿದಾರರ ಕಪಿಮುಷ್ಟಿಗೆ ಸಿಲುಕಿ ಕಣ್ಮರೆಯಾಗುತ್ತಿವೆ.

ಹೌದು..! ನಗರದ ಕುವೆಂಪುನಗರದ ಪ್ರತಿ ಅಡ್ಡರಸ್ತೆಯಲ್ಲೂ ಹಾಗೂ ನಗರದ ಹಲವು ಕಡೆ ಕನ್ಸರ್ವೆನ್ಸಿ ಗಲ್ಲಿಗಳಿವೆ. ಈ ಹಿಂದೆ ನಗರಸಭೆವತಿಯಿಂದ ಗಲ್ಲಿಗಳಿಗೆ ಸಿಮೆಂಟ್ ರಸ್ತೆ ನಿರ್ಮಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಆದರೆ, ಪ್ರಸುತ್ತ ಬಹುತೇಕ ಗಲ್ಲಿ ರಸ್ತೆಗಳು ಕಸ ಸುರಿಯುವ ೇವರಿಟ್ ಜಾಗ ಎನಿಸಿವೆ. ಎಲ್ಲೆಂದರಲ್ಲಿ ಕಸ ಸುರಿಯುವುದಲ್ಲದೇ ರಸ್ತೆಗಳು ದಿನೇದಿನೆ ಒತ್ತುವರಿಯಾಗುತ್ತಿವೆ. ಗಲ್ಲಿಗಳ ಅಭಿವೃದ್ಧಿಗೆ ನಗರಸಭೆ ತೋರಿಸಿದ ಕಾಳಜಿಯನ್ನು ಗಲ್ಲಿಗಳನ್ನು ಉಳಿಸಿಕೊಳ್ಳಲು ತೋರುತ್ತಿಲ್ಲ ಎಂಬ ಆರೋಪ ನಗರವಾಸಿಗಳಿಂದ ಕೇಳಿಬರುತ್ತಿದೆ.

ಸಂಚಾರದ ಜಾಗ ತ್ಯಾಜ್ಯ ವಿಲೇವಾರಿಗೆ!

ಒಂದು ಅಡ್ಡರಸ್ತೆಯಿಂದ ಮತ್ತೊಂದು ಅಡ್ಡರಸ್ತೆಗೆ ಸಂಪರ್ಕ ಕಲ್ಪಿಸಬೇಕಿದ್ದ ಗಲ್ಲಿ ರಸ್ತೆಗಳು ಸಂಚಾರ ಬಳಕೆಗೆ ಯೋಗ್ಯವಲ್ಲ ಎನ್ನುವ ಸ್ಥಿತಿ ತಲುಪಿವೆ. ಕುವೆಂಪುನಗರದ ಒಂದನೇ ಅಡ್ಡರಸ್ತೆಯಿಂದ ಎರಡನೇ ಅಡ್ಡರಸ್ತೆಗೆ ಸಂಪರ್ಕ ಕಲ್ಪಿಸುವ ಗಲ್ಲಿ ಹೊರತುಪಡಿಸಿ, ಉಳಿದೆಲ್ಲ ಗಲ್ಲಿರಸ್ತೆಗಳು ಭಾಗಶಃ ಮುಚ್ಚಿದ್ದು, ಸದ್ಯ ತ್ಯಾಜ್ಯ ವಿಲೇವಾರಿಯ ತಾಣಗಳಾಗಿವೆ. ಅದರಲ್ಲೂ ಎರಡನೇ ಅಡ್ಡರಸ್ತೆಯಿಂದ ಮೂರನೇ ಅಡ್ಡರಸ್ತೆಗೆ ಸಂಪರ್ಕ ಕಲ್ಪಿಸುವ ಗಲ್ಲಿಯಂತೂ ಸಂಪೂರ್ಣವಾಗಿ ಕಸದಲ್ಲೇ ಮುಚಿದೆ. ತ್ಯಾಜ್ಯ ತಿನ್ನಲು ಹಂದಿ, ನಾಯಿ, ಬೀಡಾಡಿ ದನಗಳು ಗುಂಪು ಗುಂಪಾಗಿ ಗಲ್ಲಿಯನ್ನು ಅಡ್ಡಾ ಮಾಡಿಕೊಂಡಿವೆ. ಅಲ್ಲದೇ ಕಸದ ಜತೆಗೆ ಗಿಡಗಂಟಿಗಳೂ ಬೆಳೆದಿರುವ ಕಾರಣ ಈ ಮಾರ್ಗಗಳಲ್ಲಿ ಸಂಚಾರ ಅಸಾಧ್ಯವಾಗಿದ್ದು, ಇಲ್ಲಿನ ನಿವಾಸಿಗಳು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಒತ್ತುವರಿಗೂ ಸಿಲುಕಿದೆ !

ಕೆಲ ವರ್ಷಗಳ ಹಿಂದೆ ಕನ್ಸರ್ವೆನ್ಸಿ ಜಾಗಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ತದನಂತರದಲ್ಲಿ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ ಪರಿಣಾಮ ನಗರದ ಕನ್ಸರ್ವೆನ್ಸಿ ರಸ್ತೆಗಳು ಕೆಲವೆಡೆ ಒತ್ತುವರಿಯಾಗುತ್ತಿವೆ. ಗಲ್ಲಿಯ ನಿವಾಸಿಗಳಲ್ಲದೇ ಕೆಲ ಹೊರಗಿನ ವ್ಯಕ್ತಿಗಳೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾಗ ನಮ್ಮದೇ ಎನ್ನುವ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನ್ಯಾಯಾಲಯದ ಸಮೀಪವಿದ ಕನ್ಸರ್ವೆನ್ಸಿ ಜಾಗವನ್ನು ವಾಣಿಜ್ಯ ಸಮುಚ್ಚಯವೊಂದು ಬಳಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಸುಗಮ ಸಂಚಾರಕ್ಕೂ ಅಡೆತಡೆ

ನಗರದ ಹೆದ್ದಾರಿಯಲ್ಲಿ ಕೆಲವೆಡೆ ರಸ್ತೆವಿಭಜಕವನ್ನು ಹೊರತುಪಡಿಸಿ, ಉಳಿದೆಲ್ಲ ಕಡೆ ಮುಚ್ಚಲಾಗಿದೆ. ಇದರಿಂದಾಗಿ ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ಹೋಗಬೇಕಾದ ವಾಹನ ಸವಾರರು ಸುತ್ತಿ ಬಳಸುವುದನ್ನು ತಪ್ಪಿಸುವ ಸಲುವಾಗಿ ಹೆದ್ದಾರಿಯಲ್ಲೇ ಕೆಲವರು ವಿರುದ್ಧ ದಿಕ್ಕಿನ ಸಂಚಾರ ನಡೆಸುತ್ತಿದ್ದಾರೆ. ಇದು ಅಪಘಾತ ಹಾಗೂ ಸುಗಮ ಸಂಚಾರಕ್ಕೆ ತಡೆಯುಂಟುಮಾಡುತ್ತಿದೆ. ಹೆದ್ದಾರಿಯ ಎರಡು ಕಡೆ ಇರುವ ಈ ಗಲ್ಲಿಗಳನ್ನು ಅಭಿವೃದ್ಧಿಪಡಿಸಿದರೆ, ಸಂಚಾರ ಅವ್ಯವಸ್ಥೆಯೂ ಸರಿಯಾಗಲಿದೆ.

ಪೌರಾಯುಕ್ತರೇ, ಗಮನಹರಿಸಿ!

ನಗರದ ಗಲ್ಲಿ ರಸ್ತೆಗಳು ಸಂಚಾರಕ್ಕೆ ಬಳಕೆಯಾಗದೆ ತ್ಯಾಜ್ಯ ವಿಲೇವಾರಿಯ ಸ್ಥಳವಾಗಿ ಬದಲಾಗುತ್ತಿರುವ ಬಗ್ಗೆ ನಗರಸಭೆ ಪೌರಾಯುಕ್ತರು ತುರ್ತು ಗಮನಹರಿಸಬೇಕಿದೆ. ಕನ್ಸರ್ವೆನ್ಸಿ ರಸ್ತೆಗಳನ್ನು ಗುರುತಿಸಿ, ತ್ಯಾಜ್ಯ ಹಾಕದಂತೆ ಕ್ರಮವಹಿಸಬೇಕಿದೆ. ಅಲ್ಲದೇ ಒತ್ತುವರಿ ಹಾಗೂ ಮುಚ್ಚಿರುವ ಕನ್ಸರ್ವೆನ್ಸಿ ಜಾಗವನ್ನು ಗುರುತಿಸಿ ಸಂಚಾರಕ್ಕೆ ಯೋಗ್ಯವಾಗುವಂತೆ ಅಭಿವೃದ್ಧಿ ಪಡಿಸಬೇಕಿದೆ.

ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಬೇಕಿದ್ದ ನಗರದ ಕನ್ಸರ್ವೆನ್ಸಿ ರಸ್ತೆಗಳು ತ್ಯಾಜ್ಯ ವಿಲೇವಾರಿಯ ತಾಣಗಳಾಗಿ ಬದಲಾಗಿರುವುದು ವಿಪರ್ಯಾಸ. ಸರ್ಕಾರಿ ಜಾಗಗಳ ಒತ್ತುವರಿ ಸಹ ಆಗಿವೆ. ಲಕ್ಷಾಂತರ ರೂ. ವ್ಯಯಿಸಿ ಗಲ್ಲಿರಸ್ತೆಗಳನ್ನು ಅಭಿವೃದ್ಧಿಪಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇನ್ಮುಂದಾದರೂ ಗಲ್ಲಿಗಳನ್ನು ರಕ್ಷಿಸುವ ಜತೆಗೆ ಅಭಿವೃದ್ಧಿಪಡಿಸುವ ಯೋಜನೆಯನ್ನು ನಗರಸಭೆ ರೂಪಿಸಲಿ.
ದೀಪಕ್, ನಗರ ನಿವಾಸಿ

ಎರಡನೇ ಅಡ್ಡರಸ್ತೆ ಸೇರಿ ಕೆಲವೆಡೆ ಕನ್ಸರ್ವೆನ್ಸಿ ರಸ್ತೆಗಳಲ್ಲಿ ಕಸಸುರಿಯುತ್ತಿದ್ದಾರೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ. ನಗರದ ಸ್ವಚ್ಛತೆಯಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯ. ಇನ್ನು ಕನ್ಸರ್ವೆನ್ಸಿ ಜಾಗದ ಒತ್ತುವರಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೂ ಪರಿಶೀಲನೆ ನಡೆಸುತ್ತೇವೆ. ಒತ್ತುವರಿಯಾದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು.
ಪುಟ್ಟಸ್ವಾಮಿ, ಪೌರಾಯುಕ್ತರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net