ತ್ಯಾಜ್ಯ ಸಂಗ್ರಹ ಕಾರ್ಯ ಮತ್ತೆ ಆರಂಭ

kasa
ಗಂಗೊಳ್ಳಿಯ ಮೀನುಗಾರಿಕಾ ಬಂದರು ಸಮೀಪ ನಿರ್ಮಾಣಗೊಂಡಿರುವ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಸ್ವಚ್ಛತೆ ನಡೆಸಲಾಗುತ್ತಿರುವುದು.
Published on

ಗಂಗೊಳ್ಳಿ: ಗಂಗೊಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿದ್ದ ತ್ಯಾಜ್ಯ ಸಂಗ್ರಹ ಕಾರ್ಯ ಪುನಃ ಆರಂಭಗೊಂಡಿದೆ. ರೋಗ ರುಜಿನಗಳ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿದ್ದ ಗಂಗೊಳ್ಳಿ ಬಂದರು ಪ್ರದೇಶದ ಘನ ಮತ್ತು ದ್ರವ ಸಂಪನ್ಮೂಲ ಘಟಕ ಸ್ವಚ್ಛಗೊಳಿಸಲಾಗಿದೆ.

ಜಿಲ್ಲೆಯ ಅತಿ ದೊಡ್ಡ ಗ್ರಾಪಂಗಳಲ್ಲಿ ಒಂದಾದ ಗಂಗೊಳ್ಳಿಯಲ್ಲಿ ಕಳೆದ ಕೆಲ ತಿಂಗಳಿಂದ ಘನ ಮತ್ತು ದ್ರವ ಸಂಪನ್ಮೂಲ ಘಟಕದ ಕಾರ್ಯನಿರ್ವಹಣೆ ವಹಿಸಿಕೊಂಡಿದ್ದ ಸ್ಥಳೀಯ ಎನ್‌ಜಿಒ ಸಂಸ್ಥೆ ಸುಮಾರು ಎರಡು ವರ್ಷಗಳಿಂದ ಗಂಗೊಳ್ಳಿ ಗ್ರಾಪಂ ವ್ಯಾಪ್ತಿಯ 1300ಕ್ಕೂ ಮಿಕ್ಕಿ ಮನೆ ಮತ್ತು ವಾಣಿಜ್ಯ ಮಳಿಗೆಗಳಿಂದ ತ್ಯಾಜ್ಯ ಸಂಗ್ರಹಿಸುವ ಕಾರ್ಯ ನಡೆಸುತ್ತಿತ್ತು. ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಸಮಸ್ಯೆ ಮತ್ತು ಇನ್ನಿತರ ಕೆಲ ಕಾರಣಗಳಿಂದ ಒಂದು ವಾರದಿಂದ ತ್ಯಾಜ್ಯ ಸಂಗ್ರಹ ಸ್ಥಗಿತಗೊಂಡು ಮನೆ ಹಾಗೂ ವಾಣಿಜ್ಯ ಮಳಿಗೆಗಳ ಮುಂದೆ ತ್ಯಾಜ್ಯ ಚೀಲ ತುಳುಕಾಡುತ್ತಿತ್ತು. ಇದರಿಂದ ಜನರಿಗೆ ಸಮಸ್ಯೆಯಾಗಿತ್ತು. ಗಂಗೊಳ್ಳಿ ಮೀನುಗಾರಿಕಾ ಬಂದರು ಸಮೀಪ ಸುಮಾರು 7.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ತ್ಯಾಜ್ಯ ರಾಶಿ ಗ್ರಾಮಸ್ಥರ ಕಣ್ಣು ಕುಕ್ಕಿಸುವಂತೆ ಮಾಡಿತ್ತು.

ಈ ಬಗ್ಗೆ ವಿಜಯವಾಣಿ ಅ.19ರಂದು ಸಚಿತ್ರ ವರದಿ ಪ್ರಕಟಿಸಿ ಸ್ಥಳೀಯಾಡಳಿತ ಮತ್ತು ಸಂಬಂಧಪಟ್ಟ ಗುತ್ತಿಗೆದಾರರ ಕಣ್ಣು ತೆರೆಸುವ ಪ್ರಯತ್ನ ನಡೆಸಿತ್ತು. ವಿಜಯವಾಣಿ ವರದಿಗೆ ಸ್ಪಂದಿಸಿದ ಸ್ಥಳೀಯಾಡಳಿತ ಹಾಗೂ ಘಟಕದ ನಿರ್ವಹಣೆಯ ಗುತ್ತಿಗೆ ಪಡೆದ ಎನ್‌ಜಿಒ ಸಂಸ್ಥೆ, ಸ್ಥಗಿತಗೊಂಡಿದ್ದ ತ್ಯಾಜ್ಯ ಸಂಗ್ರಹಣೆ ಪುನಃ ಆರಂಭಿಸಿದೆ. ಇನ್ನೊಂದೆಡೆ ಎಸ್‌ಎಲ್‌ಆರ್‌ಎಂ ಘಟಕದೆಲ್ಲೆಡೆ ರಾಶಿ ಬಿದ್ದಿದ ತ್ಯಾಜ್ಯ ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net