ಭತ್ತಕ್ಕೆ ನ್ಯಾಯಯುತ ಬೆಲೆ ನಿಗದಿಗೆ ಬೇಡಿಕೆ

raitha dhwani
ರೈತಧ್ವನಿ ಸಂಘಟನೆ ವತಿಯಿಂದ ಕೋಟದಲ್ಲಿ ನಡೆದ ಸಭೆ ಭತ್ತಕ್ಕೆ ನೈಜ ಬೆಲೆ ಆಗ್ರಹಿಸಿ ತುರ್ತು ಸಭೆ ರೈತಧ್ವನಿ ಅಧ್ಯಕ್ಷ ಜಯರಾಮ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿತು.
Published on

ಕೋಟ: ಭತ್ತಕ್ಕೆ ನ್ಯಾಯಯುತ ಬೆಲೆ ನಿಗದಿಪಡಿಸಬೇಕು ಎನ್ನುವ ರೈತರ ಬೇಡಿಕೆಗೆ ಅಕ್ಕಿ ಗಿರಣಿಗಳು ಸ್ಪಂದಿಸದಿರುವುದರಿಂದ ಹಾಗೂ ಕಟಾವು ಅವಧಿಯಲ್ಲಿ ಬೆಲೆ ಇಳಿಕೆ ತಂತ್ರ ಅನುಸರಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನವೆಂಬರ್ ಪ್ರಥಮ ವಾರದಲ್ಲಿ ನಿಗದಿತ ದಿನದಂದು ಕೋಟದಲ್ಲಿ ಪ್ರತಿಭಟನೆ ನಡೆಸಲು ಸ್ಥಳೀಯ ರೈತಧ್ವನಿ ಸಂಘಟನೆ ವತಿಯಿಂದ ಬುಧವಾರ ಕೋಟದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಾಗತಿಕ ಬದಲಾವಣೆಗಳು, ಮಾರುಕಟ್ಟೆ ಮೌಲ್ಯ ಅವಲಂಭಿಸಿ ದರ ನಿಗದಿಯಾಗುತ್ತದೆ ಎನ್ನುವ ಮಿಲ್ ಮಾಲೀಕರ ಹೇಳಿಕೆ ಸತ್ಯಾಂಶದಿಂದ ಕೂಡಿಲ್ಲ. ಬೆಲೆ ನಿಗದಿಪಡಿಸುವಲ್ಲಿ ಮಿಲ್‌ಗಳ ಪಾತ್ರ ಮುಖ್ಯ. ಆದರೆ ರೈತರಿಂದ ಕಡಿಮೆ ಬೆಲೆಗೆ ಭತ್ತ ಖರೀದಿಸಿ ಅದರ ಎರಡು-ಮೂರು ಪಟ್ಟು ಹೆಚ್ಚು ದರಕ್ಕೆ ಅಕ್ಕಿ ಮಾರಾಟ ಮಾಡಲಾಗುತ್ತದೆ. ಭತ್ತದಿಂದ ಹೊಟ್ಟು, ಬೂದಿ ಮೊದಲಾದ ಬೆಲೆ ಬಾಳುವ ವಸ್ತುಗಳು ಉತ್ಪತ್ತಿಯಾಗುತ್ತದೆ ಎಂದು ರೈತಧ್ವನಿ ಅಧ್ಯಕ್ಷ ಜಯರಾಮ್ ಶೆಟ್ಟಿ ತಿಳಿಸಿದರು.

ಮಿಲ್‌ಗೆ ಮುತ್ತಿಗೆ

ರೈತರು ಬೆಳೆದ ಬೆಳೆಗೆ ನ್ಯಾಯಯುತ ದರ ನೀಡದ ಮಿಲ್ ಮಾಲೀಕರ ಬಗ್ಗೆ ಕ್ರಮಕೈಗೊಳ್ಳುವಂತೆ ಈಗಾಗಲೇ ಜಿಲ್ಲಾಧಿಕಾರಿ, ಎಸ್.ಪಿ.ಗೆ ಮನವಿ ನೀಡಲಾಗಿದೆ. ನವೆಂಬರ್ ಪ್ರಥಮ ವಾರದಲ್ಲಿ ನಿಗದಿತ ದಿನದಂದು ಸಾವಿರಾರು ಸಂಖ್ಯೆಯ ರೈತರು ಕೋಟದಲ್ಲಿ ಸಭೆ ನಡೆಸಿ ತೆಕ್ಕಟ್ಟೆ ತನಕ ಪಾದಯಾತ್ರ ನಡೆಸಿ ಅಲ್ಲಿನ ಅಕ್ಕಿ ಮಿಲ್‌ಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಮತ್ತು ಪ್ರತಿಯೊಂದು ಊರುಗಳಲ್ಲೂ ಹೋರಾಟ ನಡೆಸಲಿದ್ದೇವೆ ಎಂದು ರೈತಧ್ವನಿ ಪ್ರಮುಖರಾದ ಟಿ.ಮಂಜುನಾಥ ತಿಳಿಸಿದರು. ಈ ಬಗ್ಗೆ ರೈತರು ಸಹಮತ ವ್ಯಕ್ತಪಡಿಸಿದರು.

ರೈತರಾದ ಭಾಸ್ಕರ್ ಶೆಟ್ಟಿ, ಶಿವಮೂರ್ತಿ, ಶಿವ ಪೂಜಾರಿ, ತಿಮ್ಮ ಕಾಂಚನ್, ಭೋಜ ಪೂಜಾರಿ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net