

ಲಕ್ಷ್ಮೇಶ್ವರ: ಪಟ್ಟಣದಲ್ಲಿರುವ ಇಟ್ಟಿಕೆರೆಗೆ ಚರಂಡಿ ನೀರಿನ ಜತೆಗೆ ತ್ಯಾಜ್ಯ ಸಂಗ್ರಹವಾಗಿ ಕೆರೆ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿತ್ತು. ಕೆರೆಗೆ ಹರಿದು ಬರುವ ಚರಂಡಿ ನೀರು ತಡೆಯಬೇಕು ಮತ್ತು ಕೆರೆಯ ಅಭಿವೃದ್ಧಿ ಮಾಡಬೇಕು ಎಂದು ವಿಜಯವಾಣಿ ಬುಧವಾರ ವರದಿ ಪ್ರಕಟಿಸಿತ್ತು.
ವರದಿಯ ಹಿನ್ನ್ನೆಲೆಯಲ್ಲಿ ಪುರಸಭೆಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಪೌರ ಕಾರ್ಮಿಕರ ಸಹಾಯದಿಂದ ಜೆಸಿಬಿ ಬಳಸಿ ಕೆರೆಯಲ್ಲಿ ಸಂಗ್ರಹವಾದ ಅಪಾರ ಪ್ರಮಾಣ ತ್ಯಾಜ್ಯ ಎತ್ತುವಳಿ ಮಾಡಿಸಿದ್ದಾರೆ.
ಈ ವೇಳೆ ಮಾತನಾಡಿದ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಕೆರೆಯಲ್ಲಿ ಸಂಗ್ರಹವಾದ ತ್ಯಾಜ್ಯ ಸ್ವಚ್ಛಗೊಳಿಸಲಾಗುತ್ತಿದೆ. ಇನ್ನು ಮುಂದೆ ಕೆರೆಗೆ ತ್ಯಾಜ್ಯ ಹರಿದು ಬರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ಕೆರೆಯಂಚಿನ ಪ್ರದೇಶದಲ್ಲಿ ತ್ಯಾಜ್ಯ ಹಾಕದಂತೆ ಮತ್ತು ಈ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ನಿಗಾವಹಿಸಲಾಗುವುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಮಾತನಾಡಿ, ಪುರಸಭೆ ವತಿಯಿಂದ ಕೆರೆ ಅಭಿವೃದ್ಧಿಗಾಗಿ 57 ಲಕ್ಷ ರೂ. ನಿಧಿ ನೀಡಲಾಗುವುದು. ಮಳೆಗಾಲದಲ್ಲಿ ಕೆರೆಗೆ ನೀರು ಹರಿದು ಬರುವ ಕಾಲುವೆಗೆ ಅಡ್ಡಲಾಗಿ ಕಬ್ಬಿಣದ ಜಾಳಿಗೆ ಹಾಕಿ ನೀರಿನ ಜತೆಗೆ ಪ್ಲಾಸ್ಟಿಕ್ ಇತರ ತ್ಯಾಜ್ಯ ಬರದಂತೆ ತಡೆಯಲಾಗುವುದು. ಸುತ್ತಲೂ ಬಂಡು ನಿರ್ಮಾಣ ಮತ್ತು ಹೆಚ್ಚುವರಿ ನೀರು ಹರಿದು ಹೋಗುವಾಗ ಕೆಳಗಡೆ ಪ್ರದೇಶದ ಜನರಿಗೆ ಧಕ್ಕೆಯಾಗದಂತೆ ರಾಜಕಾಲುವೆ ನಿರ್ಮಾಣ ಮಾಡಲಾಗುವುದು. ಅಲ್ಲದೆ, ಕೆರೆಯ ಅಭಿವೃದ್ಧಿಗಾಗಿ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ 7 ಕೋಟಿ ರೂ. ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆಗೆ ಕಳುಹಿಸಲಾಗಿದೆ ಎಂದರು.