ಚಿಂತಾಮಣಿಗೂ ಹಬ್ಬಿದ ವಕ್ಫ್ ವಿವಾದ

FotoJet
Published on

ಎರಡು ಗುಂಪಿನ ನಡುವೆ ಮಾತಿನ ಚಕಮಕಿ | ಪೊಲೀಸರ ಮಧ್ಯಪ್ರವೇಶದಿಂದ್ದ ಪರಿಸ್ಥಿತಿ ತಿಳಿ

 ಚಿಂತಾಮಣಿ : ರಾಜ್ಯಾದ್ಯಂತ ಹಬ್ಬಿರುವ ವಕ್ಫ್ ವಿವಾದ ಚಿಂತಾಮಣಿಯಲ್ಲೂ ಕಿಚ್ಚು ಹಚ್ಚಿದೆ. ಜಮೀನಿನ ಹಕ್ಕು ಸಂಬಂಧ ರೈತರು ಮತ್ತು ಜಾಮೀಯಾ ಮಸೀದಿ ಗುಂಪಿನ ನಡುವೆ ಶುಕ್ರವಾರ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ನಗರದ 31ನೇ ವಾರ್ಡ್‌ನ ತಿಮ್ಮಸಂದ್ರದ ಸರ್ವೇ ನಂ.13ರ 2.19 ಎಕರೆ ಮತ್ತು ಸರ್ವೇ ನಂ.20ರ 2 ಎಕರೆ ಜಮೀನು ವಿವಾದದ ಕೇಂದ್ರವಾಗಿದೆ. ಜಾಮೀಯಾ ಮಸೀದಿ ಪದಾಧಿಕಾರಿಗಳು ಜಮೀನು ಮಾಲೀಕತ್ವಕ್ಕೆ ಸಂಬಂಧಿಸಿದಂತೆ ನಾಮಲಕ ಅಳವಡಿಸಿದರೆ, ರೈತರ ಗುಂಪು ನಾಮಲಕ ಕಿತ್ತು ಉಳುಮೆಗೆ ಮುಂದಾಗಿದೆ. ಈ ವೇಳೆ ಮಾತಿನ ಚಕಮಕಿ ನಡೆದು, ಗಲಾಟೆ ಹಂತಕ್ಕೆ ತಲುಪಿತ್ತು. ಪೊಲೀಸರು ಮಧ್ಯೆ ಪ್ರವೇಶಿಸಿ ಜಾಗದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಹಾಗೆಯೇ ಉಳುಮೆಗೆ ಬಳಸಿದ್ದ ಟ್ರ್ಯಾಕ್ಟರ್ ವಶಪಡಿಸಿಕೊಂಡಿದ್ದಾರೆ.

ನ್ಯಾಯಾಲಯದಲ್ಲಿ ವಿವಾದ

ವಿವಾದಿತ ಜಾಗ ಫಕೀರ ಇನಾಂತಿ ಮತ್ತು ಮಕ್ಕಾನ್ ಇನಾಂತಿ ಜಮೀನಾಗಿದೆ. ಪ್ರಸ್ತುತ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿದೆ. ಹಲವು ವರ್ಷಗಳಿಂದ ಅನುಭವದಲ್ಲಿದ್ದ ರೈತರು ನಮ್ಮ ಜಮೀನು ಎಂದು ವಾದಿಸುತ್ತಿದ್ದರೆ, ರಾಜ್ಯ ವಕ್ಫ್ ಬೋರ್ಡ್ ಜಮೀನು ಎನ್ನುವುದು ಜಾಮೀಯಾ ಮಸೀದಿಯ ವಾದ.

ಈ ಹಿಂದೆ ಜಮೀನಿನ ಬಗ್ಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ಇತರ ನ್ಯಾಯಾಲಯಗಳಲ್ಲಿ ವಿವಾದದ ವಿಚಾರಣೆ ನಡೆದು, ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ವಿವಾದಿತ ಸ.ನಂ: 13ರ 2.19 ಎಕರೆ ಮತ್ತು ಸ.ನಂ: 20ರ 2 ಎಕರೆ ಜಮೀನು ಮೈಸೂರು ರಾಜ್ಯ ಮಂಡಳಿಯ (ದಿನಾಂಕ: 28/03/1968ರ) ಅಧಿಸೂಚನೆಯಂತೆ ವಕ್ಫ್ ಸ್ವತ್ತು ಎಂದು ಉಲ್ಲೇಖವಾಗಿದೆ. ಸತ್ತಾರ್ ಸಾಬ್ ಅವರ ಹೆಸರಿಗೆ (ಸ್ವೀಕರಿಸಿದ ಸಂಖ್ಯೆ ಎಂಡಬ್ಲ್ಯುಬಿ (19)111964 ದಿನಾಂಕ 21/07/1965 ರಂದು) ಅಧಿಸೂಚನೆ ಹೊರಡಿಸಿ, ವಕ್ಫ್ ಆಸ್ತಿಯೆಂದು ತೀರ್ಪು ನೀಡಲಾಗಿದೆ. ಇದನ್ನು ಪ್ರಶ್ನಿಸಿ ರೈತರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪೊಲೀಸರ ಮಧ್ಯಪ್ರವೇಶ

ಚಿಂತಾಮಣಿ ನಗರದ ದೊಡ್ಡಪೇಟೆಯ ಜಾಮೀಯಾ ಮಸೀದಿ ಕಮಿಟಿ ಪದಾಧಿಕಾರಿಗಳು ಜಮೀನನ್ನು ಸರ್ವೇ, ಹದ್ದುಬಸ್ತು ವಾಡಿಸಿ, ಜಮೀನಿನ ಸುತ್ತಲೂ ಕಲ್ಲಿನ ಕೂಚು, ಮುಳ್ಳುತಂತಿ ಬೇಲಿ ಹಾಕಿಸಿ, ವಕ್ಫ್ ಆಸ್ತಿ ಎಂದು ಈ ಹಿಂದೆಯೇ ನಾಮಲಕ ಹಾಕಿಸಿದ್ದು, ಇದರ ನಡುವೆ ಮೊದಲಿನಿಂದಲೂ ವಿವಾದಿತ ಜಮೀನಿನಲ್ಲಿ ಉಳುಮೆ ವಾಡುತ್ತಿದ್ದ 31ನೇ ವಾರ್ಡ್‌ನ ನಾಗೇಶ್, ಶ್ರೀರಾಮರೆಡ್ಡಿ ಕುಟುಂಬ ಗುರುವಾರ ತಂತಿಬೇಲಿ ಕಿತ್ತು ಹಾಕಿದ್ದಾರೆ. ಇದು ಗಲಾಟೆಗೆ ಪ್ರಮುಖ ಕಾರಣವಾಗಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಉದ್ವಿಗ್ನ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಡಿವೈಎಸ್‌ಪಿ ಮುರಳೀಧರ್, ಇನ್ಸ್‌ಪೆಕ್ಟರ್ ಶಿವರಾಜ್ ನೇತತ್ವದಲ್ಲಿ ಸಿಬ್ಬಂದಿ ಸ್ಥಳದಲ್ಲಿ ಠಿಕಾಣಿ ಹೂಡಿದ್ದು, ಬಿಗಿ ಭದ್ರತೆ ಕೈಗೊಂಡಿದ್ದಾರೆ. ತಹಸೀಲ್ದಾರ್ ಸುದರ್ಶನ್ ಯಾದವ್ ಜಮೀನು ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿದ್ದಾರೆ.

ದೂರು ದಾಖಲು

ಚಿಂತಾಮಣಿಯ ಜಾಮೀಯಾ ಮಸೀದಿಯ ಇನಾಯತ್ ಎಂಬುವರು ವಕ್ಫ್ ಆಸ್ತಿ ಧ್ವಂಸಕ್ಕೆ ಸಂಬಂಧಿಸಿದಂತೆ ಗ್ರಾವಾಂತರ ಠಾಣೆಗೆ ದೂರು ನೀಡಿದ್ದಾರೆ. ನಾಗೇಶ್, ನಗರಸಭೆ ಮಾಜಿ ಸದಸ್ಯ ರಾಮಮೂರ್ತಿ, ವೆಂಕಟರೆಡ್ಡಿ, ಶಿವಾರೆಡ್ಡಿ ಮತ್ತಿತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ವಿವಾದಿತ ಪ್ರಕರಣಗಳು

ವಕ್ಫ್ ಜಾಗದ ವಿವಾದ ಪ್ರಕರಣಗಳು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಹಿಂದೆ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ಹುಟ್ಟೂರಿಗೆ ಸಮೀಪದಲ್ಲಿರುವ ಕಂದವಾರ ಗ್ರಾಮದಲ್ಲಿ ಸರ್ಕಾರಿ ಶಾಲೆಯನ್ನು ವಕ್ಫ್ ಜಾಗ ಎಂದು ಹೇಳಲಾಗಿತ್ತು. ಕೊನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪಹಣಿಯಲ್ಲಿ ತಿದ್ದುಪಡಿ ಮಾಡಿ ಶಿಕ್ಷಣ ಇಲಾಖೆಗೆ ಒಪ್ಪಿಸಲಾಗಿದೆ. ಶಿಡ್ಲಘಟ್ಟ ತಾಲೂಕಿನಲ್ಲಿ ಬೆಳ್ಳೂಟಿ ಆಂಜನೇಯಸ್ವಾಮಿ ದೇವಾಲಯದ ಜಾಗವನ್ನು ವಕ್ಫ್‌ಗೆ ಸೇರಿದ್ದು ಎಂಬುದಾಗಿ ಹೇಳುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net