

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಆರೋಪದ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ನಗರದಲ್ಲಿ ಸೋಮವಾರ ಪ್ರತಿಭಟಿಸಿತು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ಬಿ.ಬಿ.ರಸ್ತೆಯಲ್ಲಿನ ಅಂಬೇಡ್ಕರ್ ವೃತ್ತದವರೆಗೆ ಪಕ್ಷದ ಧ್ವಜಗಳನ್ನು ಹಿಡಿದುಕೊಂಡು ಸಾಗಿದ ಪ್ರತಿಭಟನಾಕಾರರು, ಕೆಲಕಾಲ ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ. ಸುಧಾಕರ್ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟ ಆಡಳಿತಕ್ಕೆ ಜನರು ಬೇಸತ್ತು ಹೆಚ್ಚಿನ ಬಹುಮತದೊಂದಿಗೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದರು. ಇದಕ್ಕೆ ಬಡ ಮತ್ತು ಮಧ್ಯಮ ವರ್ಗದವರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶವಕುಮಾರ್ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಇದರಿಂದ ತಲ್ಲಣಗೊಂಡಿರುವ ವಿಪಕ್ಷಗಳು ಮೊದಲಿನಿಂದಲೂ ಸರ್ಕಾರವನ್ನು ಬೀಳಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿದರು.
ಕಳೆದ ವಿಧಾನಸಭಾ ಚುನಾವಣೆಯ ಲಿತಾಂಶ ಪ್ರಕಟವಾಗುವ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಉದ್ದೇಶದೊಂದಿಗೆ ಸಿಂಗಾಪುರದಲ್ಲಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆಸೆ ಈಡೇರಲಿಲ್ಲ. ಇದಕ್ಕೆ ಬಿಜೆಪಿಯೊಂದಿಗೆ ಸೇರಿಕೊಂಡು ಸುಳ್ಳು ಆರೋಪಗಳ ಮೂಲಕ ಗೊಂದಲದ ವಾತಾವರಣ ನಿರ್ಮಿಸುತ್ತಿದ್ದಾರೆ. ಜತೆಯಲ್ಲಿರುವ ಭ್ರಷ್ಟರನ್ನು ಬಿಟ್ಟು ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸ್ವಪಕ್ಷೀಯ ಹಗರಣಗಳ ಅರಿವಿಲ್ಲ ಎಂದು ವ್ಯಂಗ್ಯ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬ್ಯಾಂಕಿನ ಕೆಲ ಅಧಿಕಾರಿಗಳಿಂದ ಅವ್ಯವಹಾರವಾಗಿದೆಯೇ ಹೊರತು ಸರ್ಕಾರದ ಪಾತ್ರವಿಲ್ಲ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಈಗಾಗಲೇ ತಪ್ಪು ಮಾಡದಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನು ಪ್ರಶ್ನಿಸುತ್ತಿರುವ ಬಿಜೆಪಿಗೆ ಮೊಟ್ಟೆ ಹಗರಣ, ಗಣಿಧಣಿ, ಕರೊನಾ, ವಿವಿಧ ನಿಗಮಗಳಲ್ಲಿ ಅವ್ಯವಹಾರ ಸೇರಿ ಸ್ವಪಕ್ಷೀಯ ಹಗರಣಗಳ ಬಗ್ಗೆ ಅರಿವಿಲ್ಲ. ಇದನ್ನೆಲ್ಲವನ್ನೂ ಮರೆತು ನಮ್ಮ ವಿರುದ್ಧ ಹೋರಾಟ ನಡೆಸುತ್ತಿದೆ ಎಂದು ಡಾ. ಎಂ.ಸಿ. ಸುಧಾಕರ್ ವ್ಯಂಗ್ಯವಾಡಿದರು.
ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಮಾತನಾಡಿ, ಬಿಜೆಪಿಯು ದೇಶದ ಇತರ ರಾಜ್ಯಗಳಲ್ಲಿನ ಸರ್ಕಾರಗಳನ್ನು ಆಪರೇಷನ್ ಕಮಲದ ಮೂಲಕ ಬೀಳಿಸಲು ಯತ್ನಿಸುತ್ತಿದೆ. ಇದು ಸಂವಿಧಾನ ವಿರೋಧಿ ನಡೆ ಎಂದು ಕಿಡಿಕಾರಿದರು.
ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ವಿಧಾನಪರಿಷತ್ ಸದಸ್ಯರಾದ ಎಂ.ಆರ್.ಸೀತಾರಾಮ್, ಡಿ.ಟಿ.ಶ್ರೀನಿವಾಸ್, ಮಾಜಿ ಸಚಿವ ವಿ.ಮುನಿಯಪ್ಪ, ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ, ಅನಸೂಯಮ್ಮ ನಟರಾಜನ್, ಎಸ್.ಎಂ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮಾಜಿ ಅಧ್ಯಕ್ಷ ಎಂ.ಆಂಜಿನಪ್ಪ, ಮುಖಂಡರಾದ ರಾಜೀವ್ ಗೌಡ, ಪುಟ್ಟು ಆಂಜಿನಪ್ಪ ಮತ್ತಿತರರು ಭಾಗವಹಿಸಿದ್ದರು.
ಅರೆಬೆತ್ತಲೆ ಪ್ರದರ್ಶನ
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಮುಖಂಡರು ಅರೆ ಬೆತ್ತಲೆಯಾಗಿ ಪ್ರತಿಭಟಿಸುವುದರೊಂದಿಗೆ ಧಿಕ್ಕಾರದ ೋಷಣೆಗಳನ್ನು ಕೂಗಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಹುನ್ನಾರ, ಸಂವಿಧಾನ ದುರುಪಯೋಗ, ತಾರತಾಮ್ಯ ಧೋರಣೆಯ ವಿರುದ್ಧ ಕಿಡಿಕಾರಿದರು. ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖವಾಡವನ್ನು ಧರಿಸಿ, ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು. ರಾಜ್ಯಪಾಲರ ಭಾವಚಿತ್ರದ ಮೇಲೆ ಇಂಕ್ ಚೆಲ್ಲಿ, ಅಡ್ಡಗೆರೆ ಎಳೆದು ಆಕ್ರೋಶ ವ್ಯಕ್ತಪಡಿಸಿದರು.