

*ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಹಲವು ನಿಯಮಗಳು
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಗಣೇಶ ಚತುರ್ಥಿ ಆಚರಣೆಗೆ ಜಿಲ್ಲಾಡಳಿತ ಪೊಲೀಸ್ ಇಲಾಖೆ ಹಲವು ನಿಯಮ ಜಾರಿಗೆ ತಂದಿದ್ದು, ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯುವುದೇ ಸಂಟನೆಗಳಿಗೆ ದೊಡ್ಡ ಸವಾಲಾಗಿದೆ.
ಗೌರಿಗಣೇಶ ಹಬ್ಬ ಬಂತೆಂದರೆ ನಗರದ, ಗ್ರಾಮೀಣ ಪ್ರದೇಶದ ಬೀದಿ ಬೀದಿಗಳು ಶೃಂಗಾರಗೊಂಡು ಎಲ್ಲೆಲ್ಲೂ ಗಣೇಶಗಳು ಕಾಣುತ್ತವೆ. ಇಂತಹ ಧಾರ್ಮಿಕ ಆಚರಣೆಗೆ ಅನುಮತಿ ಪಡೆಯಲು ನಾನಾ ತೊಡಕುಗಳು ಎದುರಾಗಿವೆ.
ನಗರ ಗ್ರಾಮೀಣ ಪ್ರದೇಶದಲ್ಲಿ ಪ್ರತಿಷ್ಠಾಪನೆಗೆ ಅಗ್ನಿಶಾಮಕ, ಬೆಸ್ಕಾಂ, ನಗರಸಭೆ, ಸ್ಥಳಿಯ ಗ್ರಾಪಂ, ಪೊಲೀಸ್ ಠಾಣೆಗಳಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ, ಏಕಗವಾ ಮೂಲಕ ಒಂದೇ ಸ್ಥಳದಲ್ಲಿ ಅನುಮತಿ ನೀಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಹಬ್ಬಕ್ಕೆ ಮೂರು ದಿನಗಳಷ್ಟೇ ಇದ್ದು, ಏಕಗವಾ ಯೋಜನೆ ಪರಿಪೂರ್ಣವಾಗಿಲ್ಲ. ಇದರಿಂದ ಗಣೇಶ ಪ್ರತಿಷ್ಠಾಪನೆಗೆ ನಗರಸಭೆ, ಬೆಸ್ಕಾಂ, ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆ, ಗ್ರಾಪಂ ಕಚೇರಿಗಳಿಗೆ ಅಲೆಯಬೇಕಿದೆ ಎಂಬುದು ಸಾರ್ವಜನಿಕರ ದೂರಾಗಿದೆ.
ನಗರಸಭೆಯಲ್ಲಿ ಏಕಗವಾ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಅಲ್ಲಿ ಪೊಲೀಸ್ ಮತ್ತು ನಗರಸಭೆಯವರು ಮಾತ್ರ ಅನುಮತಿ ನೀಡುತ್ತಿದ್ದು, ಬೆಸ್ಕಾಂ ಅಧಿಕಾರಿಗಳು ನಗರಸಭೆಯಲ್ಲಿ ಇಲ್ಲದ ಕಾರಣ ಬೆಸ್ಕಾಂ ಕಚೇರಿಗೆ ಹೋಗಬೇಕು. ಮೊದಲು ಗ್ರಾಪಂ, ನಂತರ ಬೆಸ್ಕಾಂ ಹಾಗೂ ಪೊಲೀಸ್ ಠಾಣೆಯಲ್ಲಿ ಅನುಮತಿ ಪಡೆಯಬೇಕು. ಇದಕ್ಕಾಗಿಯೇ ಎರಡು ದಿನ ಮೀಸಲಿಡಬೇಕು. ಇಷ್ಟಾಗಿಯೂ 5 ದಿನವಷ್ಟೇ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗುತ್ತಿದೆ ಎಂಬ ಅಪಸ್ವರ ಕೇಳಿಬಂದಿದೆ.
ಗ್ರಾಮೀಣ ಪ್ರದೇಶದವರಿಗೆ ರಾಮನಗರ ತಾಲೂಕು ಪಂಚಾಯಿತಿ ಹಂತದಲ್ಲಿ ಏಕಗವಾ ಮೂಲಕ ಅನುಮತಿ ನೀಡಲಾಗುತ್ತದೆ ಎಂದು ಪೊಲೀಸ್ ಡಿಎಸ್ಪಿ ದಿನಕರಶೆಟ್ಟಿ ಹೇಳಿದ್ದಾರೆ. ಆದರೆ, ಹಬ್ಬಕ್ಕೆ ಎರೆಡೇ ಬಾಕಿ ಇದ್ದರೂ ಅನುಮತಿ ನೀಡುವ ಯಾವುದೇ ಚಟುವಟಿಕೆ ಇಲ್ಲವಾಗಿದೆ.
ನಗರಸಭೆಯಲ್ಲಿ ಏಕಗವಾ ಮೂಲಕ ಐದು ದಿನಗಳವರೆಗೆ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗುತ್ತಿದೆ. ಉಳಿದಂತೆ ಪೊಲೀಸ್ ಇಲಾಖೆಯ ಡಿಎಸ್ಪಿ ಅವರ ಹಂತದಲ್ಲಿ ನಡೆಯುತ್ತಿದೆ. ನಮ್ಮಲ್ಲಿ ಅನುಮತಿಗೆ ಯಾವುದೇ ಸಮಸ್ಯೆ ಇಲ್ಲ. ಅನುಮತಿ ಪತ್ರ ಕೇಳಿ ಬಂದವರಿಗೆ ನಗರಸಭೆಯಿಂದ ಅನುಮತಿ ನೀಡಲಾಗುತ್ತಿದೆ.
> ಜಯಣ್ಣ, ಆಯುಕ್ತರು, ನಗರಸಭೆ, ರಾಮನಗರ
ಗ್ರಾಮೀಣ ಪ್ರದೇಶದಲ್ಲಿ ಗಣೇಶ ಉತ್ಸವ ಅನುಮತಿ ಸ್ಥಳಿಯ ಗ್ರಾಪಂಮಟ್ಟದಲ್ಲೇ ಸಿಗುವ ವ್ಯವಸ್ಥೆ ಆಗಬೇಕು. ಇದರಿಂದ ನಗರ ಪ್ರದೇಶಕ್ಕೆ ಯುವಜನರು ಅಲೆಯುವುದು ತಪ್ಪುತ್ತದೆ. ಜಿಲ್ಲಾಡಳಿತ ಕೂಡಲೇ ಗ್ರಾಪಂಮಟ್ಟದಲ್ಲಿಯೇ ಅನುಮತಿ ನೀಡುವ ವ್ಯವಸ್ಥೆ ಮಾಡಬೇಕು.
> ಗೋವಿಂದರಾಜು
ಕರ್ನಾಟಕ ರಣಧೀರಪಡೆ ಉಪಧ್ಯಕ್ಷ, ಅಂಜನಾಪುರ