ಲಿಖಿತ ಭರವಸೆ, ವಾಲ್​ಮನ್​ಗಳ ಮುಷ್ಕರ ವಾಪಸ್​

Protest_DC
Published on

ತುಮಕೂರು: ಗುತ್ತಿಗೆ ಪದ್ಧತಿ ರದ್ದುಪಡಿಸಿ ನೇರನೇಮಕಾತಿ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸರ್ಕಾರದ ಹಂತದಲ್ಲಿ ನಿರ್ಧಾರವಾಗಬೇಕಿರುವ ಹಿನ್ನೆಲೆ ಪೌರಾಡಳಿತ ನಿರ್ದೇಶನಾಲಯದ ಗಮನಸೆಳೆಯಲು ಮುಂದಿನ ದಿನಗಳಲ್ಲಿ ನೀರು ಸರಬರಾಜು ನೌಕರರ ಸಂಘದ ಪದಾಧಿಕಾರಿಗಳ ನಿಯೋಗವನ್ನು ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಕೊಂಡೊಯ್ಯುವ ಲಿಖಿತ ಭರವಸೆಯನ್ನು ಕೊಟ್ಟ ಹಿನ್ನೆಲೆ ಕಳೆದ 3 ದಿನಗಳಿಂದ ಜಿಲ್ಲಾ ನೀರು ಸರಬರಾಜು ನೌಕರರ ಸಂಘದ ನೇತೃತ್ವದಲ್ಲಿ ನಡೆಯುತ್ತಿದ್ದ ಅರ್ನಿದಿಷ್ಟಾವಧಿ ಮುಷ್ಕರ ವಾಪಸ್​ ಪಡೆಯಲಾಯಿತು. ಅಲ್ಲದೆ, ಮಧ್ಯಾಹ್ನ ಆಯುಕ್ತೆ ಬಿ.ವಿ.ಅಶ್ವಿಜ ಅಧ್ಯಕ್ಷತೆಯಲ್ಲಿ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಸ್ಥಳಿಯವಾಗಿ ಈಡೇರಿಸಬಹುದಾದ ಬೇಡಿಕೆಗಳಾದ ಗೃಹಭಾಗ್ಯ, ನಿವೇಶನ, ಪಿಎಫ್ ​ ಪಾವತಿ ಬಗೆಹರಿಸುವ ಭರವಸೆ ಸಹ ಸಿಕ್ಕಿದೆ.

ಇದಕ್ಕು ಮುನ್ನ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ 3 ದಿನಗಳಿಂದ ಜಿಲ್ಲಾ ನೀರು ಸರಬರಾಜು ನೌಕರರ ಸಂದ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಆವರಣದಲ್ಲಿ ಅನಿದಿರ್ಷಾವಧಿ ಮುಷ್ಕರ ನಡೆಸುತ್ತಿರುವ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಸಮಸ್ಯೆಗಳನ್ನು ಆಲಿಸಿ ಪ್ರತಿಭಟನೆ ಕೈಬಿಡುವಂತೆ ಮನವೊಲಿಸಲು ಯತ್ನಿಸಿದರು. ಈ ವೇಳೆ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಸಾಥ್​ ನೀಡಿದರು.

ಮುಷ್ಕರ ನಿರತ ನೀರು ಸರಬರಾಜು ನೌಕರರ ಅಹವಾಲುಗಳನ್ನು ಆಲಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್​ , ನಗರದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಜನ ಸುಖವಾಗಿ ಬದುಕು ನಡೆಸುತ್ತಿರುವುದಕ್ಕೆ ಕಾರಣಕರ್ತರು ನೀವೇ. ಮಹಾನಗರ ಪಾಲಿಕೆಯಲ್ಲಿ ಸ್ವಚ್ಛತೆ ಮತ್ತು ನೀರು ನಿರ್ವಹಣೆ ತುಂಬಾ ಮುಖ್ಯವಾಗಿದೆ. ನಿಮ್ಮಗಳ ನ್ಯಾಯಯುತ ಬೇಡಿಕೆ ಈಡೇರಿಕೆಯ ತೀಮಾರ್ನವನ್ನು ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಬೇಕಾಗಿದ್ದು ಸ್ಥಳಿಯ ಮಟ್ಟದಲ್ಲಿ ತೀಮಾರ್ನ ಮಾಡುವಂತಹದ್ದಲ್ಲ. ಹಾಗಾಗಿ ನಿಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.

ನೇರ ನೇಮಕಾತಿ, ನೇರಪಾವತಿ, ಸಮಾನ ಕೆಲಸಕ್ಕೆ , ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನಮ್ಮ ಹಂತದಲ್ಲಿ ಏನಾದರೂ ಬೇಡಿಕೆ ಈಡೇರಿಸಲು ಅವಕಾಶ ಇದ್ದರೆ ಅಂತಹುಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುತ್ತೇವೆ. ಈಗ ಬೇಸಿಗೆ ಶುರುವಾಗಿದ್ದು ನಗರದಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ. ಮುಷ್ಕರವನ್ನು ಕೈಬಿಟ್ಟು ನಿಮ್ಮ ಸೇವೆಯನ್ನು ನಗರದ ಜನತೆಗೆ ಒದಗಿಸಬೇಕು. ಮುಷ್ಕರದಿಂದ ಎಷ್ಟು ಅನಾನುಕೂಲವಾಗುತ್ತದೆ ಎಂಬುದು ನಿಮಗೆಲ್ಲಾ ಅರಿವಿದೆ. ನಿಮ್ಮಗಳ ಬೇಡಿಕೆ ಸರ್ಕಾರದ ಮಟ್ಟದಲ್ಲಿ ಈಡೇರಬೇಕಾಗಿರುವುದರಿಂದ ಕೊಂಚ ವಿಳಂಬವಾಗಬಹುದು. ಇದನ್ನು ಅರ್ಥ ಮಾಡಿಕೊಂಡು ಸೇವೆ ಪುನರಾರಂಭಿಸಬೇಕು ಎಂದು ಮನವಿ ಮಾಡಿದರು.

ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ ಮಾತನಾಡಿ, ನಾನು ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದು ನಿಮ್ಮ ಬೇಡಿಕೆಗಳನ್ನು ಅವರ ಗಮನಕ್ಕೆ ತಂದಿದ್ದೇನೆ. ಬೇಸಿಗೆ ಆರಂಭವಾಗಿರುವುದರಿಂದ ನಗರದಾದ್ಯಂತ ನೀರಿನ ಸಮಸ್ಯೆ ಉದ್ಭವಿಸುತ್ತಿದೆ. ಎಲ್ಲ ವಾರ್ಡ್​ಗಳಿಂದ ನಾಗರಿಕರಿಂದ ನೀರಿಗಾಗಿ ದೂರವಾಣಿ ಕರೆಗಳು ಬರುತ್ತಿವೆ. ದಯವಿಟ್ಟು ಮುಷ್ಕರವನ್ನು ಕೈಬಿಟ್ಟು ಸೇವೆಯನ್ನು ಆರಂಭಿಸಬೇಕು ಎಂದರು.

ಸಂಘದ ಅಧ್ಯಕ್ಷ ಕೆ.ಕುಮಾರ್​ ಮಾತನಾಡಿ, ಕಳೆದ 20& 25 ವರ್ಷಗಳಿಂದ ಹಗಲು-ರಾತ್ರಿ ನಾವು ಕೆಲಸ ಮಾಡುತ್ತಿದ್ದೇವೆ. ಪಂಪ್​ಹೌಸ್​, ಶುದ್ಧೀಕರಣ, ಕಂದಾಯ ವಸೂಲಿ, ಪಿಐಡಿ ಬರೆಯುವ ಕೆಲಸ ಸೇರಿದಂತೆ ಇನ್ನಿತರೆ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ. ಹಾಗಾಗಿ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಬೇಕು. ಬೆಳಗ್ಗೆಯೇ ಮನೆಯಿಂದ ಕೆಲಸಕ್ಕೆ ಬಂದರೆ ಮತ್ತೆ ಮನೆಗೆ ಹೋಗಲು ರಾತ್ರಿ 12 ಗಂಟೆಯಾಗುತ್ತದೆ. ನಮಗೆ ನೇರ ಪಾವತಿ ಮಾಡುವುದರೊಂದಿಗೆ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಉಪಾಧ್ಯಕ್ಷ ನಟರಾಜು, ಪ್ರಧಾನ ಕಾರ್ಯದರ್ಶಿ ಮಂಜುನಾಥ್​, ಖಜಾಂಚಿ ಚಂದ್ರಯ್ಯ, ನಂದೀಶ್​, ಮಂಜುನಾಥ್​, ರಮೇಶ್​, ಸಿಪಿಐ ಮುಖಂಡ ಸೈಯದ್​ ಮುಜೀಬ್​ ಮತ್ತಿತರರು ಪ್ರತಿಭಟನೆ ನೇತೃತ್ವವಹಿಸಿದ್ದರು. ವಾಲ್​ ಮನ್​ಗಳಾದ ಟಿ.ಎನ್​.ನರಸಿಂಹಮೂರ್ತಿ, ಕುಮಾರ್​, ಶಿವಣ್ಣ, ರಾಜೇಶ್​, ಸತೀಶ್​ ಮತ್ತಿತರರು ಇದ್ದರು.

ಮಾಜಿ ಕಾರ್ಪೋರೇಟರ್ ಗಳ ಬೆಂಬಲ

ನಗರಪಾಲಿಕೆಯ ಮಾಜಿ ಸದಸ್ಯರುಗಳು ಬುಧವಾರ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ ವಾಲ್​ಮನ್​, ಲೀಕೇಜ್​, ಪಂಪ್​ ಹೌಸ್​ ನೌಕರರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಬಿಜೆಪಿ ಮಾಜಿ ಕಾಪೋರ್ರೇಟರ್​ಗಳಾದ ಕೆ.ಎಸ್​.ಮಂಜುಳ, ಸಿ.ಎನ್​.ರಮೇಶ್​, ಕಾಂಗ್ರೆಸ್​ ಮುಖಂಡ ರವಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net