

World Water Day : ವಿಶ್ವ ಜಲ ದಿನ (ಮಾರ್ಚ್ 22) ದ ಅಂಗವಾಗಿ ಕನ್ನಡ ನಂಬರ್ 1 ದಿನಪತ್ರಿಕೆ ವಿಜಯವಾಣಿ ವತಿಯಿಂದ ಧಾರವಾಡದ ಕೆಸಿಡಿ ಆವರಣದಲ್ಲಿ ಇಂದು (ಮಾರ್ಚ್ 23) ವಾಕಥಾನ್ ಸೇರಿದಂತೆ ವಿವಿಧ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇಂದು ಬೆಳಗ್ಗೆ 6.45ಕ್ಕೆ ಅಗ್ನಿಹೋತ್ರದಿಂದ ಕಾರ್ಯಕ್ರಮ ಆರಂಭವಾಯಿತು. ನಂತರ ಝುಂಬಾ ನೃತ್ಯ ನಡೆಯಿತು. ಇದಾದ ಬಳಿಕ ವಾಕಥಾನ್ಗೆ ಶಿವಾ ಸಂಕೇಶ್ವರ ಹಾಗೂ ಮನಗುಂಡಿ ಬಸವಾನಂದ ಶ್ರೀಗಳು ಚಾಲನೆ ನೀಡಿದರು. ಕೆಸಿಡಿಯಿಂದ ಆರಂಭವಾದ ವಾಕಥಾನ್, ವಿವೇಕಾನಂದ ವೃತ್ತದವರೆಗೆ ತೆರಳಿ ವಾಪಸ್ ಕೆಸಿಡಿಗೆ ಆಗಮನವಾಯಿತು. ಇದಾದ ನಂತರ ಸಭಾ ಕಾರ್ಯಕ್ರಮ ನಡೆಯಿತು. ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಕೂಡ ಏರ್ಪಡಿಸಲಾಗಿದೆ.
ಖ್ಯಾತ ನಿಸರ್ಗ ಚಿಕಿತ್ಸಾ ತಜ್ಞರು ಹಾಗೂ ಮನಗುಂಡಿಯ ಶ್ರೀ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶುದ್ಧ ನೀರೆಂದರೆ ಅದು ಮಳೆ ನೀರು. ಪವಿತ್ರ, ರುಚಿಯಾದದ್ದು ಎಲ್ಲವೂ ಮಳೆ ನೀರು. ಇದಕ್ಕಿಂತ ದೊಡ್ಡ ತೀರ್ಥ ಯಾವುದಿದೆ? ಹೀಗಾಗಿ ಮನೆ ಮೇಲೆ ಬೀಳುವ ಮಳೆನೀರನ್ನು ಇಂಗಿಸಿ. ಕಳೆದ 14 ವರ್ಷದಿಂದ ಮಳೆ ನೀರು ಕುಡಿತಿವಿ. ಕೋಟಿ ಲೀಟರ್ಗೂ ಅಧಿಕ ನೀರನ್ನು ಇಂಗಿಸುತ್ತೆವೆ. ಅದರಲ್ಲಿ 20 ಸಾವಿರ ಲೀಟರ್ ಕುಡಿತಿವಿ. ಅಷ್ಟು ನೀರು ಉಳಿಸುವ ಕೆಲಸ ಆಗುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ತಜ್ಣ ಪ್ರಕಾಶ ಭಟ್, ಶಿವ ಅಂದರೆ ಒಳ್ಳೆಯದು. ತಾಯಿ ಮಕ್ಕಳನ್ನು ಹೇಗೆ ನೋಡುತ್ತಾರೊ ಹಾಗೆ ನೀರು ನಮ್ಮನ್ನು ಕಾಯುತ್ತದೆ. ನೀರು ಸರಿಯಾಗಿ ಬಳಸೋಣ. ನೀರನ್ನು ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಉಳಿಸಿ, ಸಾಗೋಣ ಮತ್ತು ರಕ್ಷಿಸೋಣ ಎಂದು ಕರೆ ನೀಡಿದರು.
ವಾಲ್ಮಿಯ ನಿವೃತ್ತ ನಿರ್ದೇಶಕರಾದ ರಾಜೇಂದ್ರ ಪೋದ್ದಾರ ಅವರು ಮಾತನಾಡಿ, ಇದು ದೊಡ್ಡ ಕಾರ್ಯಕ್ರಮ. ಇದೇ ರೀತಿಯ ಉತ್ಸಾಹ ಮುಂದುವರಿಯಬೇಕು. ಜಗತ್ತಿನ ಮಹತ್ವದ ವಸ್ತು ನೀರು. ಆದರೆ, ಅದರ ಬಗ್ಗೆ ತಾತ್ಸಾರ ಇದೆ. ಎಲ್ಲರೂ ಜವಾಬ್ದಾರಿ ವಹಿಸಿ ನೀರು ಊಳಿಸೋಣ. ಯಾರಲ್ಲಿ ಅಂತಃಕರಣ ಇದೆ, ಕಣ್ಣಲ್ಲಿ ನೀರಿದೆ ಅವರೆಲ್ಲ ಹೊಣೆ ಹೊರಬೇಕು? ಜಗತ್ತಿನ ಅನೇಕ ನಾಗರಿಕತೆಗಳು ಜಲಸಂಕಷ್ಟದಿಂದ ಜನವಸತಿ ಅಳಿದು ಹೋಗಿದೆ. ನೀರಿಲ್ಲದೇ ಲಕ್ಷಾಂತರ ಜನ ಪರದಾಡುತ್ತಿದ್ದಾರೆ. ಭವಿಷ್ಯದ ಜಾಗತಿಕ ಕಲಹಗಳು ನೀರಿನಿಂದ ಆಗಬಹುದು. ಹೀಗಾಗಿ ನೀರಿನ ಪಾವಿತ್ರ್ಯತೆ ಕಾಯ್ದುಕೊಳ್ಳೋಣ. ಸಾಮಾಜಿಕ ಮಾಧ್ಯಮ ಮಿಸ್ ಯ್ಯೂಸ್ ಅಗ್ತಿದೆ. ಕೃಷಿಯಲ್ಲಿ ನೀರು ಅಪವ್ಯಯ ಆಗ್ತಿದೆ. ವಾಟರ್ ವಾರಿಯರ್ಸ ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಜಯಾನಂದ ಟ್ರಾವೆಲ್ಸ್ ಎಂಡಿ ಶಿವಾ ಸಂಕೇಶ್ವರ ಮಾತನಾಡಿ, ನೀರು ಉಳಿಸಲು ಎಲ್ಲರೂ ಪ್ರಯತ್ನಿಸಿ. ಜನಸಂಖ್ಯೆಯಲ್ಲಿ ನಮ್ಮ ದೇಶ ಮುಂದೆ ಇದೆ. ನಾವೆಲ್ಲ ನೀರಿನ ಬಗ್ಗೆ ಆಲೋಚಿಸಬೇಕು. ನಮ್ಮ ಕಚೇರಿಗಳಲ್ಲಿ ನೀರು, ವಿದ್ಯುತ್ ಉಳಿಸುವ ಬಗ್ಗೆ ಗಮನ ಹರಿಸಬೇಕು. ಹೊರಗೆ ಊಟ ಆದ ಮೇಲೆ ಬಾಟಲ್ ನೀರು ಅರ್ಧ ಉಳಿದರೆ ಚೆಲ್ಲಬಾರದು. ಎಲ್ಲರೂ ನೀರು ಉಳಿಸಲು ಆದ್ಯತೆ ನೀಡಿ ಎಂದು ಕರೆ ನೀಡಿದರು.