ದಾಸೋಹಕ್ಕೆ ಕರೆ ಮಾಡಿದ 24 ಗಂಟೆ ನಂತರ ಬರುತ್ತೆ ಊಟ!: ಹಸಿವಿನಿಂದ ಬಳಲುತ್ತಿದ್ದಾರೆ ಕೂಲಿ ಕಾರ್ಮಿಕರು

Karmikaru 21 April 20
Published on

ಬೆಂಗಳೂರು: ದಾಸೋಹ ಸಹಾಯವಾಣಿಗೆ ಕರೆ ಮಾಡಿದರೆ, ಒಂದು ದಿನದ ನಂತರ ಊಟ ತಂದುಕೊಡುತ್ತಿದ್ದಾರೆ. ಅಲ್ಲಿವರೆಗೂ ಹಸಿವಿನಿಂದ ಬಳಲುವ ಸ್ಥಿತಿ ನಿರ್ಮಾಣವಾಗಿದೆ.

ಲಾಕ್‌ಡೌನ್ ವೇಳೆ ಯಾರೊಬ್ಬರು ಹಸಿವಿನಿಂದ ಬಳಲಬಾರದು ಎಂದು ಕಾರ್ಮಿಕ ಇಲಾಖೆ ನೇತೃತ್ವದಲ್ಲಿ ದಾಸೋಹ ಸಹಾಯವಾಣಿಯನ್ನು ಸರ್ಕಾರ ಆರಂಭಿಸಿದೆ. ಸಹಾಯವಾಣಿಗೆ ಕರೆ ಮಾಡಿದರೆ ಮೊದಲು ಒಂದು ದಿನ ದಿನದ ನಂತರ ಊಟ ದೊರೆಯುತ್ತಿತ್ತು. ಆದರೆ ಈಗ 2 ದಿನ ಕಾಯಬೇಕಿದೆ. ಮತ್ತೊಮ್ಮೆ ಊಟ ಬೇಕಾದರೆ ಪುನಃ ಕರೆ ಮಾಡಿ ಮತ್ತೆ ಒಂದು ದಿನ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರು ಹೊರ ವಲಯದ ದೊಡ್ಡಕಲ್ಲಸಂದ್ರ ಬಳಿ ವಾಸವಿರುವ 10ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕ ಕುಟುಂಬಗಳು ಆಹಾರಕ್ಕಾಗಿ ಸಂಕಷ್ಟ ಎದುರಿಸುತ್ತಿದೆ. ಬಿಬಿಎಂಪಿ ಅಥವಾ ಕಾರ್ಮಿಕ ಇಲಾಖೆಯಿಂದ ಇವರಿಗೆ ದಿನಸಿ ಕಿಟ್ ವಿತರಣೆ ಮಾಡಿಲ್ಲ. ಒಂದು ಹೊತ್ತಿನ ಊಟ ಮಾಡಿಕೊಂಡು ಉಪವಾಸ ಮಲಗುತ್ತಿದ್ದಾರೆ. ದುಡಿಮೆ ಇಲ್ಲದೆ ಆಹಾರ ಸಾಮಗ್ರಿ ಖರೀದಿಗೂ ಹಣವಿಲ್ಲದಾಗಿದೆ.15 ದಿನದ ಹಿಂದೆ ಯಾರೋ ಬಂದು 3 ಕೆ.ಜಿ ಅಕ್ಕಿ, ಬೇಳೆ, ಎಣ್ಣೆ, ಕೊಟ್ಟು ಹೋಗಿದ್ದರು. ಅದು ಒಂದು ವಾರಕ್ಕೆ ಖಾಲಿಯಾಗಿದೆ. ದಿನಸಿ ಸಾಮಗ್ರಿ ಕೊಡಿ ಪುಣ್ಯ ಬರುತ್ತದೆ ಎಂದು ಈರಣ್ಣ ಎಂಬ ಕಾರ್ಮಿಕ ಮನವಿ ಮಾಡುತ್ತಾರೆ.

ಸಹಾಯವಾಣಿ ಬಗ್ಗೆ ಗೊತ್ತಿಲ್ಲ: ಪ್ರತಿನಿತ್ಯ 2 ಲಕ್ಷ ಜನರಿಗೆ ದಾಸೋಹ ಸಹಾಯವಾಣಿ ಮೂಲಕ ಆಹಾರ ಮತ್ತು ದಿನಸಿ ಒದಗಿಸಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಅರ್ಹರಿಗೆ ಆಹಾರ ಹಾಗೂ ದಿನಸಿ ಕಿಟ್‌ಗಳು ಸಿಗುತ್ತಿಲ್ಲ. ಎಷ್ಟೋ ಮಂದಿಗೆ ದಾಸೋಹ ಸಹಾಯವಾಣಿ ಕುರಿತು ಗೊತ್ತಿಲ್ಲ.

ಅರ್ಹರಿಗೆ ತಲುಪುತ್ತಿಲ್ಲ ಆಹಾರ: ಬೆಂಗಳೂರು ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಯಿಂದ 1 ಲಕ್ಷ ಹಾಗೂ ಬಿಬಿಎಂಪಿಯಿಂದ 50 ಸಾವಿರ ದಿನಸಿ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಆದರೆ, ಅವು ಅರ್ಹರ ಪಾಲಾಗುತ್ತಿಲ್ಲ. ಜನಪ್ರತಿನಿಧಿಗಳು ಕೊಟ್ಟ ಮಾಹಿತಿ ಆಧರಿಸಿ ಬಿಬಿಎಂಪಿ ಅಧಿಕಾರಿಗಳು ಪಟ್ಟಿ ತಯಾರಿಸುತ್ತಿದ್ದಾರೆ. ಮತದಾನ ಹಕ್ಕು ಇರುವವರನ್ನು ಮಾತ್ರ ಗುರುತಿಸಿ ಜನಪ್ರತಿನಿಧಿಗಳು ಪಟ್ಟಿ ನೀಡುತ್ತಿದ್ದಾರೆ. ಇದರಿಂದ ಸಾವಿರಾರು ಜನರು ಆಹಾರ, ದಿನಸಿ ಇಲ್ಲದೆ ಪರದಾಡುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಕರೊನಾ ಸ್ವಯಂಸೇವಕರೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net