ಶಿಕ್ಷಣವು ಕೇವಲ ಜ್ಞಾನಾರ್ಜನೆಯ ಸಾಧನವಲ್ಲ

Vysiri_Mangement
Published on

ತುಮಕೂರು: ಶಿಕ್ಷಣವು ಕೇವಲ ಜ್ಞಾನಾರ್ಜನೆಯ ಸಾಧನವಲ್ಲ. ಜೀವನವನ್ನು ಸಾರ್ಥಕಗೊಳಿಸುವ, ಸ್ವಾವಲಂಬನೆಯನ್ನು ಬೆಳೆಸುವ ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಕೌಶಲ್ಯಗಳನ್ನು ಒದಗಿಸುವ ಶಕ್ತಿಶಾಲಿ ಮಾಧ್ಯಮವಾಗಿದೆ ಎಂದು ತುಮಕೂರು ವಿವಿ ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಡಾ.ಕೆ.ಜಿ.ಪರಶುರಾಮ್​ ಹೇಳಿದರು.

ನಗರದ ವೈಸಿರಿ ಇನ್​ಸ್ಟಿಟ್ಯೂಟ್​ ಆಫ್​ ಮ್ಯಾನೇಜ್​ಮೆಂಟ್​ ಆ್ಯಂಡ್​ ಟೆಕ್ನಾಲಜಿಯ ಬಿಬಿಎ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ "ಭವಿಷ್ಯದ ಸಂಸ್ಥಾಪಕರು: ಯುವ ಉದ್ಯಮಿಗಳಿಗೆ ಅವಕಾಶಗಳು' ವಿಶ್ವ ಉದ್ಯಮಶೀಲತೆ ದಿನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವಕರಿಗೆ ಉದ್ಯೋಗ ಸೃಷ್ಟಿಯ ಜತೆಗೆ ಉದ್ಯಮಶೀಲತೆ ಮತ್ತು ಸುಸ್ಥಿರ ಅಭಿವೃದ್ಧಿಯ ಕೌಶಲ್ಯಗಳನ್ನು ನೀಡುವ ಮೂಲಕ ಅವರನ್ನು ಸಶಕ್ತಗೊಳಿಸಬೇಕು ಎಂದರು.

ಪಿಯುಸಿ ನಂತರದ ಶಿಕ್ಷಣವನ್ನು ಕೇವಲ ಉದ್ಯೋಗಕ್ಕೆ ಸೀಮಿತಗೊಳಿಸದೆ, ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಯ ಭವಿಷ್ಯ ಆಧಾರವಾಗಿ ಪರಿಗಣಿಸಬೇಕು. ನಗರ ಪ್ರದೇಶಗಳಲ್ಲಿ ಶೇ.36 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೇ.34 ನಿರುದ್ಯೋಗ ಪದವೀಧರರಿರುವ ಈ ಸಂದರ್ಭದಲ್ಲಿ, ಯುವಕರು ಉದ್ಯೋಗ ಹುಡುಕುವವರಾಗದೆ, ಉದ್ಯೋಗ ಸೃಷ್ಟಿಸುವವರಾಗಬೇಕು ಎಂದು ಸಲಹೆ ನೀಡಿದರು.

ಭಾರತವು 1.4 ಲಕ್ಷಕ್ಕೂ ಅಧಿಕ ಸ್ಟಾರ್ಟ್​ಅಪ್​ಗಳೊಂದಿಗೆ ಜಾಗತಿಕ ನಾವೀನ್ಯತೆಯ ಕೇಂದ್ರವಾಗಿ ಮಿಂಚುತ್ತಿದೆ. ಆದರೆ, ಕರ್ನಾಟಕದಂತಹ ರಾಜ್ಯಗಳಲ್ಲಿ ಇನ್ನಷ್ಟು ಪ್ರಾದೇಶಿಕ ಭಾಗವಹಿಸುವಿಕೆಯ ಅಗತ್ಯವಿದೆ. ಯುವ ಉದ್ಯಮಿಗಳಿಗೆ ಜ್ಞಾನ, ಸೃಜನಶೀಲತೆ, ಮತ್ತು ದೃಢನಿರ್ಧಾರದ ಕೌಶಲ್ಯಗಳು ಪ್ರಮುಖ ಬಂಡವಾಳವಾಗಿವೆ. ಈ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಸುಸ್ಥಿರ ಉದ್ಯಮಗಳನ್ನು ನಿರ್ಮಿಸಬೇಕು. ಉದ್ಯಮಶೀಲತೆಯ ಭವಿಷ್ಯವು ನಾವೀನ್ಯತೆ, ಇನ್​ಕ್ಯುಬೇಶನ್​, ಸುಸ್ಥಿರತೆ, ಮತ್ತು ಸಾಮಾಜಿಕ ಜವಾಬ್ದಾರಿಯ ಆಧಾರದ ಮೇಲೆ ನಿಂತಿದೆ ಎಂದು ತಿಳಿಸಿದರು.

ವಿ-ಟೆಕ್​ ಸೆಲ್ಯೂಷನ್ಸ್​ ವ್ಯವಸ್ಥಾಪಕ ನಿರ್ದೇಶಕಿ ಕೆ.ಜೆ.ನಾಗಪ್ರಿಯಾ ಮಾತನಾಡಿ, ನಮ್ಮ ಸಂಸ್ಥೆಯು ಶೈಕ್ಷಣಿಕ ಶ್ರೇಷ್ಟತೆಯ ಜತೆಗೆ ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸಲು ಬದ್ಧವಾಗಿದೆ. ಯುವ ಶಕ್ತಿಯೇ ದೇಶದ ಸಮೃದ್ಧಿಯ ಮೂಲಾಧಾರ. ಯುವಜನತೆ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡರೆ ದೃಢ, ಶಕ್ತಿಶಾಲಿ, ಮತ್ತು ಅಭಿವೃದ್ಧೀಶಿಲ ರಾಷ್ಟ್ರವನ್ನು ನಿರ್ಮಿಸಬಹುದು. ರಾಷ್ಟ್ರದ ಸಂಪತ್ತಾದ ಯುವಕರನ್ನು ಉದ್ಯಮಶೀಲರನ್ನಾಗಿಸಲು ಅಗತ್ಯ ತರಬೇತಿ ಮತ್ತು ಬೆಂಬಲವನ್ನು ಒದಗಿಸಲಾಗುವುದು ಎಂದು ಭರವಸೆಯಿತ್ತರು.

ವೈಸಿರಿ ಇನ್​ಸ್ಟಿಟ್ಯೂಟ್​ ಆಫ್​ ಮ್ಯಾನೇಜ್​ಮೆಂಟ್​ ಆ್ಯಂಡ್​ ಟೆಕ್ನಾಲಜಿ ಪ್ರಾಂಶುಪಾಲೆ ಜಿ.ಅಮೂಲ್ಯ, ಎಂಬಿಎ ವಿಭಾಗದ ನಿರ್ದೇಶಕ ಡಾ. ಟಿ.ಎಂ.ಪ್ರಸನ್ನ ಕುಮಾರ್​ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net