

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್‌ಚಾರಿತ್ರೃ ಎಂಬ ರತ್ನತ್ರಯ ಧರ್ಮದ ಪಾಲನೆಯೊಂದಿಗೆ ರಾಗ- ದ್ವೇಷ ರಹಿತನಾದ ವೀತರಾಗ ಭಗವಂತನ ಶ್ರದ್ಧಾ-ಭಕ್ತಿಯ ಧ್ಯಾನದಿಂದ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ ಎಂದು ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ವೇಣೂರು ಬಾಹುಬಲಿ ಸಭಾಭವನದಲ್ಲಿ ಶುಕ್ರವಾರ ಬಾಹುಬಲಿ ಯುವಜನ ಸಂಘ, ದಿಗಂಬರ ಜೈನತೀರ್ಥಕ್ಷೇತ್ರ ಸಮಿತಿ ಹಾಗೂ ಬ್ರಾಹ್ಮಿ ಮಹಿಳಾ ಮಂಡಲ ಆಶ್ರಯದಲ್ಲಿ ಆಯೋಜಿಸಿದ ಸಾಮೂಹಿಕ ವ್ರತೋಪದೇಶ ಸಮಾರಂಭದಲ್ಲಿ 53 ಮಂದಿ ಬಾಲಕರು ಮತ್ತು ಬಾಲಕಿಯರಿಗೆ ವ್ರತೋಪದೇಶ ನೀಡಿ ಆಶೀರ್ವಚನ ನೀಡಿದರು. ವ್ರತ ಸ್ವೀಕಾರದಿಂದ ವರ್ತನೆಗಳ ಪರಿವರ್ತನೆ ಹಾಗೂ ಸುಧಾರಣೆಯಾಗುತ್ತದೆ. ಮನ, ವಚನ, ಕಾಯದಿಂದ ಪರಿಶುದ್ಧರಾಗಿ ದೇವರು, ಗುರುಗಳು ಮತ್ತು ಶಾಸ್ತ್ರದಲ್ಲಿ ಅಚಲ ನಂಬಿಕೆ ಇಟ್ಟು ನಿತ್ಯವೂ ಜಪ, ತಪ, ಧ್ಯಾನದ ಮೂಲಕ ಆತ್ಮನಿಗಂಟಿದ ಸಕಲ ಪಾಪ ಕರ್ಮಗಳ ಕೊಳೆ ಕಳೆದುಕೊಂಡಾಗ ಮೋಕ್ಷ ಪ್ರಾಪ್ತಿಯಾಗುತ್ತದೆ. ನಿತ್ಯವೂ ಪಂಚಾಣು ವ್ರತಗಳ ಪಾಲನೆ ಮಾಡಬೇಕು. ನೀರನ್ನು ಸೋಸಿ ಕುಡಿಯಬೇಕು ಹಾಗೂ ರಾತ್ರಿ ಭೋಜನ ತ್ಯಾಗ ಮಾಡಿ ಬದುಕು ಮತ್ತು ಬದುಕಲು ಬಿಡು ಎಂಬ ತತ್ವದೊಂದಿಗೆ ಸಾತ್ವಿಕ ಜೀವನ ನಡೆಸಬೇಕು. ಜನಿವಾರ ಎಂಬುದು ರತ್ನತ್ರಯ ಧರ್ಮ ಧಾರಣೆಯ ಸಂಕೇತ. ಬೀಗದ ಕೀ ಹಾಕಲು ಅಥವಾ ಬೆನ್ನು ತುರಿಸಲು ಅದನ್ನು ಬಳಸಬಾರದು ಎಂದರು.