

ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಪರ ಹೆಚ್ಚಿನ ಒಲವಿದ್ದರೂ ನಾನಾ ಕಾರಣಗಳಿಂದಾಗಿ ಗೆಲುವಿನ ಮತಗಳನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ವಿಶ್ಲೇಷಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್‌ಗೆ ಶೇ.3ಕ್ಕೂ ಹೆಚ್ಚು ಮತಗಳು ಸಿಕ್ಕಿವೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 6.60 ಲಕ್ಷ ಮತ ಪಡೆಯಲಾಗಿದೆ. ಈ ಭಾಗದಲ್ಲಿ ಐದಾರು ವರ್ಷಗಳಿಂದಲೂ ಸಮಸ್ಯೆ ಅರಿತು, ಪರಿಹಾರಕ್ಕೆ ಶ್ರಮಿಸುತ್ತಿದ್ದು, ಮುಂಬರುವ ದಿನಗಳಲ್ಲೂ ಜನಪರ ಕೆಲಸದಲ್ಲಿ ತೊಡಗಿಸಿಕೊಳ್ಳುವೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ, ಅನಸೂಯಮ್ಮ ನಟರಾಜನ್, ಕೋಚಿಮುಲ್ ಮಾಜಿ ನಿರ್ದೇಶಕ ಎನ್.ಸಿ.ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಮುಖಂಡರಾದ ಮಮತ ಮೂರ್ತಿ ಮತ್ತಿತರರು ಇದ್ದರು.
ರಾಜಕೀಯ ವಿಪರ್ಯಾಸ
ಹಿಂದೆ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಾಗ ಕಾಂಗ್ರೆಸ್ 1 ಸ್ಥಾನ ಪಡೆದಿತ್ತು. ಆದರೆ, ಈಗ ಜೆಡಿಎಸ್ ಮೈತ್ರಿಯಲ್ಲಿ ಬಿಜೆಪಿ 17 ಸ್ಥಾನ ಗಳಿಸಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಸವಲತ್ತುಗಳನ್ನು ಜನರಿಗೆ ತಲುಪಿಸಿದ್ದರೂ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಭರವಸೆ ನೀಡುವವರಿಗೆ ಗೆಲುವು ಮತ್ತು ಪ್ರಾಮಾಣಿಕವಾಗಿ ಸವಲತ್ತು ಕೊಟ್ಟವರಿಗೆ ಸೋಲಾಗುವುದು ವಿಪರ್ಯಾಸ. ಇಂತಹ ಬೆಳವಣಿಗೆಗಳಿಗೆ ಸಮಾಜವು ಅವಕಾಶ ನೀಡದೆ ಒಳ್ಳೆಯ ನಾಯಕರನ್ನು ಬೆಳೆಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಆರ್. ಸೀತಾರಾಮ್ ಮನವಿ ಮಾಡಿದರು.
ಧೃತಿಗೆಡುವ ಅಗತ್ಯ ಇಲ್ಲ
ವಿಧಾನಸಭಾ, ಲೋಕಸಭಾ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆಯ ಮೇಲೆ ಬೇರೆ ಅಂಶಗಳು ಪ್ರಭಾವ ಬೀರುತ್ತವೆ. ಹಾಗಾಗಿ ಈ ಸೋಲಿನಿಂದ ಧೃತಿಗೆಡಬೇಕಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವುದರಿಂದ ಮುಂಬರುವ ಚುನಾವಣೆಗಳನ್ನು ಧೈರ್ಯವಾಗಿ ಎದುರಿಸಲು ಸಜ್ಜಾಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ.ಸುಧಾಕರ್ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಸ್ವಪಕ್ಷೀಯರ ಧೋರಣೆಗೆ ಅಸಮಾಧಾನ
ಪಕ್ಷದ ಹಿತಕ್ಕೆ ಧಕ್ಕೆ ತರುವ ಹೇಳಿಕೆಗಳನ್ನು ನೀಡುವ, ಸ್ವಪಕ್ಷೀಯರನ್ನು ಕಡೆಗಣಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಆಂಜಿನಪ್ಪ ಒತ್ತಾಯಿಸಿದರು. ಸ್ವಪಕ್ಷೀಯ ನಾಯಕರೊಬ್ಬರು ಚುನಾವಣೆ ವೇಳೆ ರೈತರು ಮತ್ತು ಜನಾಂಗದ ಬಗ್ಗೆ ನೀಡಿದ ಅವಮಾನಕಾರಿ ಹೇಳಿಕೆಯು ಬೇಸರಕ್ಕೆ ಕಾರಣವಾಯಿತು ಎಂದು ಆರೋಪಿಸಿದರು. ಚಿಕ್ಕಬಳ್ಳಾಪುರದಲ್ಲಿ ಶಾಸಕರು ಐದು ವರ್ಷ ಇರುತ್ತಾರೆ. ಆದರೂ ಏನೂ ಆಗಲ್ಲ. ಇದಕ್ಕೆ ಸಮಿತಿಯನ್ನು ರಚಿಸಿ ಪಕ್ಷ ಸಂಘಟಿಸಬೇಕು ಎಂದು ಒತ್ತಾಯಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು, ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಕಣ್ಣೀರು ಹಾಕಿದ ಅನುಕಂಪದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್‌ಗೆ ಗೆಲುವು ಸಿಕ್ಕಿದೆ. ಮುಂದೆ, ಜನರು ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ.
- ಕೆ.ಪಿ.ಬಚ್ಚೇಗೌಡ, ಮಾಜಿ ಶಾಸಕ, ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ: ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೆಲವರ ಹೇಳಿಕೆಗಳಿಂದಾಗಿ ಪಕ್ಷ ಹಿನ್ನಡೆ ಅನುಭವಿಸಬೇಕಾಯಿತು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಅಂದಿನ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ 2 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸೋಲು ಕಂಡರು. ಆದರೆ, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆಗೆ ಸ್ಪರ್ಧಿಸಿದರೂ ಅಭ್ಯರ್ಥಿ ಗೌತಮ್ ಸೋಲಿನ ಅಂತರ ಕಡಿಮೆಯಾಗಿದೆ ಎಂದರು.
ಕ್ಷೇತ್ರದಲ್ಲಿ ಕೆಲವು ಸ್ವಪಕ್ಷೀಯರ ಹೇಳಿಕೆಗಳೇ ಪಕ್ಷದ ಹಿನ್ನಡೆಗೆ ಕಾರಣ. ಇದಕ್ಕೆ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಹೊಣೆಗಾರರನ್ನಾಗಿಸುವುದಿಲ್ಲ. ಅವರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಉಸ್ತುವಾರಿ ನೀಡಲಾಗಿತ್ತು ಎಂದ ಅವರು, ಇನ್ನು ಪಕ್ಷದಲ್ಲಿನ ತಂತ್ರಗಾರಿಕೆ ವಿಫಲ, ನಾಯಕರ ಧೋರಣೆ ಸೇರಿ ಅಸಮಾಧಾನಿತ ವಿಚಾರಗಳ ಬಗ್ಗೆ ಪಕ್ಷದ ಆಂತರಿಕ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದರು.
ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಗೆದ್ದ ಕ್ಷೇತ್ರಗಳಲ್ಲೇ ಈಗ ಮುಗಿದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತಗಳು ಬಂದಿವೆ. ಸಾಮಾನ್ಯವಾಗಿ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆಗಳ ಮೇಲೆ ಬೇರೆ ಅಂಶಗಳು ಪ್ರಭಾವ ಬೀರುತ್ತವೆ. ಇದರಿಂದ ಒಂದೇ ರೀತಿಯ ಫಲಿತಾಂಶ ನಿರೀಕ್ಷಿಸುವುದು ಸಾಧ್ಯವಿಲ್ಲ. ಭಾರಿ ಪ್ರಮಾಣದಲ್ಲಿ ವ್ಯತ್ಯಾಸಗಳಾಗುತ್ತವೆ ಎಂದರು.