

ಶಿಗ್ಗಾಂವಿ: ಜನರಲಾಭ ಭಾವನೆ ಕೆದಕುವ ಮೂಲಕ ರಾಜಕೀಯ ಲಾಭ ಗಿಟ್ಟಿಸುವ ಹುನ್ನಾರ ಬಿಜೆಪಿ ಹೂಡಿದೆ. ಶಿಗ್ಗಾಂವಿ ಮತ್ತು ಸವಣೂರು ತಾಲೂಕುಗಳ ಪ್ರಜ್ಞಾವಂತ ಮತದಾರರು ಈ ಕುತಂತ್ರಕ್ಕೆ ಪಾಠ ಕಲಿಸಲಿದ್ದು, ಸದಾ ಕ್ಷೇತ್ರದ ಜನಸಾಮಾನ್ಯರೊಂದಿಗೆ ಬೆರೆಯುವ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ ಖಾನ್ ಪಠಾಣ ಅವರ ಕೈ ಹಿಡಿಯಲಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ವಿಶ್ವಾಸ ವ್ಯಕ್ತಪಡಿಸಿದರು.
ಶಿಗ್ಗಾಂವಿ ತಾಲೂಕಿನ ಗೊಟಗೋಡಿ, ಹೊನ್ನಾಪುರ ಸೇರಿ ಹಲವು ಗ್ರಾಮಗಳಲ್ಲಿ ಮಂಗಳವಾರ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ಅಹ್ಮದ ಖಾನ್ ಪಠಾಣ ಪರ ಮತಯಾಚಿಸಿ ಅವರು ಮಾತನಾಡಿದರು.
ಇಡೀ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ್ದು ಶಿಗ್ಗಾಂವಿಯ ಪುಣ್ಯ ನೆಲ. ಚುನಾವಣೆ ಬಂದಾಗ ಮಾತ್ರ ಜಾತಿ, ಧರ್ಮ, ಹಣದ ಮೇಲೆ ಮತ ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆ ಈ ಬಾರಿ ಯಾವುದೇ ಕಾರಣಕ್ಕೂ ಫಲ ನೀಡದು ಎಂದು ಹೇಳಿದರು.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣನವರ, ಚಂದ್ರಶೇಖರ ಮಾನೋಜಿ, ಶಿವಾಜಿ ಶಿಂಧೆ, ಎಸ್.ವೈ. ಆರೇರ, ನಾಗೇಶ ಮೋತೆ, ಎಂ.ಎನ್. ವೆಂಕೋಜಿ, ನಾಗೇಶರಾವ್, ಪಿ.ಕೆ. ನೀರಲಕಟ್ಟಿ ಇದ್ದರು.