

ರಾಮನಗರ: ಮತಗಟ್ಟೆ ಬಳಿ ಹಾಗೂ ಒಳಗೆ ಮೊಬೈಲ್ ಬಳಕೆ ನಿಷೇಧ ಹೇರಿರುವ ಹೊರತಾಗಿಯೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಓಟ್ ಮಾಡಿರುವ ವ್ಯಕ್ತಿಯೊಬ್ಬ, ಇದನ್ನು ವಿಡಿಯೋ ಮಾಡಿ ಇನ್‌ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವುದು ವೈರಲ್ ಆಗಿದೆ.
ಸುರೇಶ್ ಪರ ಓಟ್ ಹಾಕಿರೋ ಮತದಾರ, ಅದಕ್ಕೂ ಮುನ್ನಾ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಭಾವ ಚಿತ್ರವನ್ನು ತೋರಿಸಿ ಅಸಭ್ಯವಾಗಿ ಸಹ್ನೆ ಮಾಡಿ, ನಂತರ ಡಿ.ಕೆ.ಸುರೇಶ್ ಅವರ ಮುಂದಿರುವ ಬಟನ್ ಒತ್ತಿ ವಿವಿ ಪ್ಯಾಟ್‌ನಲ್ಲಿ ಖಚಿತಪಡಿಸಿಕೊಂಡಿರುವ ವಿಡಿಯೋವನ್ನು ಡಿ.ಕೆ. ಸುರೇಶ್ ಅಭಿಮಾನಿ ಬಳಗದ ಐಡಿಯಲ್ಲಿ ಹಂಚಿಕೊಂಡಿದ್ದಾರೆ.
ಈ ವಿಚಾರ ಇದೀಗ ಮತಗಟ್ಟೆ ಅಧಿಕಾರಿಗಳನ್ನು ಇಕ್ಕಟ್ಟಿದೆ ಸಿಲುಕಿಸಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ ವ್ಯಕ್ತಿಗಾಗಿ ಪೊಲೀಸರು ಹುಡಕಾಟ ನಡೆಸಿದ್ದಾರೆ. ಈ ಸಂಬಂಧ ಈಗಾಗಲೇ ಚುನಾವಣಾ ಕಚೇರಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆಯನ್ನು ಆರಂಭಿಸಿದ್ದಾರೆ.