

ತುಮಕೂರು: ಒಕ್ಕಲಿಗರ ಸಂಘದಲ್ಲಿನ ಒಡಕು ಹೊರಗಡೆ ಕಾಣದಂತೆ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಇದರಿಂದ ಸಂಘಕ್ಕೂ ಗೌರವ, ಸಮುದಾಯಕ್ಕೂ ಗೌರವ ಎಂದು ಆದಿಚುಂಚನಗಿರಿ ಸಂಸ್ಥಾನ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದಲ್ಲಿ ರಾಜ್ಯ ಒಕ್ಕಲಿಗರ ಸಂಘದವತಿಯಿಂದ ಸೋಮವಾರ ಆಯೋಜಿಸಿದ್ದ ಉಚಿತ ವಿದ್ಯಾರ್ಥಿ ನಿಲಯ ಸಮುದಾಯಭವನ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಸ್ವಾಮೀಜಿ, ವಿಧಾನಸೌಧ ಕಟ್ಟಿಸಿದ ಕೆಂಗಲ್ ಹನುಮಂತಯ್ಯ ಅವರನ್ನೇ ಅದರೊಳಗೆ ಕೂರದಂತೆ ನಮ್ಮವರೇ ಸಂಚು ಮಾಡಿ ಹೊರಹಾಕಿದರು. ದಕ್ಷಿಣ ಭಾರತದ ಮೊದಲ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ನಮಗೆ ತಕ್ಕಂತೆ ನಡೆದುಕೊಳ್ಳಲಿಲ್ಲ ಎಂದು ಅಧಿಕಾರದಿಂದ ಕೆಳಗೆ ಇಳಿಸಿದ ಉದಾಹರಣೆಗಳು ನಮ್ಮ ಮುಂದಿವೆ ಎಂದರು.
ಇಷ್ಟೆಲ್ಲದರ ನಡುವೆ ನಾವು ನಮ್ಮ ಸ್ವಾಭಿಮಾನವನ್ನು ಬಿಟ್ಟು ನಡೆದ ಉದಾಹರಣೆಗಳಿಲ್ಲ. ಅಂತಹ ಗಟ್ಟಿತನ ನಮ್ಮ ಸಮುದಾಯದಲ್ಲಿದೆ. ಟೀಕೆಗಳಿಗೆ ಧೈರ್ಯ ಗೆಡದೆ, ಸಹನೆಯ ಜತೆಗೆ ಸುಗಮ ಆಡಳಿತ ನೀಡುವ ಗುರುತರ ಜವಾಬ್ದಾರಿ ರಾಜ್ಯ ಒಕ್ಕಲಿಗರ ಸಂಘದ ಮೇಲಿದೆ ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.