

ಹುಣಸೂರು: ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಅಂಗ ಸಂಸ್ಥೆ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ವತಿಯಿಂದ ಆಯೋಜಿಸಿದ್ದ ಉದ್ಯೋಗ ಮಾರ್ಗದರ್ಶನ ಶಿಬಿರದಿಂದ ಪ್ರೇರಿತರಾಗಿ 40 ಜನರು ವಿವಿಧ ಕೌಶಲ ವೃತ್ತಿ ತರಬೇತಿಗೆ ಸೇರ್ಪಡೆಗೊಂಡರು.
ತಾಲೂಕಿನ ಗದ್ದಿಗೆ ಗ್ರಾಮದ ಶ್ರೀ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಉದ್ಯೋಗ ಮಾರ್ಗದರ್ಶನ ಶಿಬಿರದಲ್ಲಿ 77 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಪೈಕಿ 40 ವಿದ್ಯಾರ್ಥಿಗಳು ಉಚಿತವಾಗಿ ನೀಡುವ ವಿವಿಧ ಕೌಶಲ ತರಬೇತಿಗಳಿಗೆ ಸೇರ್ಪಡೆಗೊಂಡರು.
ಶಿಬಿರದಲ್ಲಿ ಮಾತನಾಡಿದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಪ್ಲೇಸ್‌ಮೆಂಟ್ ಸೆಲ್ ಅಧಿಕಾರಿ ರವಿಕುಮಾರ್, ಕೇಂದ್ರದ ವತಿಯಿಂದ ಫ್ಯಾಶನ್ ಡಿಸೈನಿಂಗ್ ಬ್ಯೂಟಿಷಿಯನ್, ಮೊಬೈಲ್ ರಿಪೇರಿ, ಪ್ಲಂಬಿಂಗ್, ಎಲೆಕ್ಟ್ರಿಷಿಯನ್, ದ್ವಿಚಕ್ರವಾಹನ ರಿಪೇರಿ, ಜನರಲ್ ಡ್ಯೂಟಿ ನರ್ಸಿಂಗ್, ಆಯುರ್ವೇದಿಕ್ ನರ್ಸಿಂಗ್, ಸ್ಪೋಕನ್ ಇಂಗ್ಲಿಷ್, ಲೈಫ್ ಸ್ಕಿಲ್, ಹಸು ಸಾಕಣೆ, ಆಡು ಕುರಿ, ಜೇನು, ರೇಷ್ಮೆ ಸಾಕಣೆ ಮುಂತಾದ 21 ತರಬೇತಿಯನ್ನು ನೀಡುತ್ತಿದ್ದೇವೆ. ಉದ್ಯೋಗ ಮಾರ್ಗದರ್ಶನ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ವಿವಿಧ ಉದ್ಯೋಗಾವಕಾಶಗಳನ್ನು ತಿಳಿಸಿಕೊಟ್ಟು, ಆಸಕ್ತರನ್ನು ಆಯಾ ವಿಷಯವಾರು ತರಬೇತಿಗಳಿಗೆ ಎಚ್.ಡಿ.ಕೋಟೆ ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿರುವ ಕೇಂದ್ರ ಸ್ಥಾನದಲ್ಲಿ ಉಚಿತ ಊಟ ವಸತಿಯೊಂದಿಗೆ ತರಬೇತಿ ನೀಡಲಾಗುವುದು ಎಂದರು.
ಹಸು, ಕುರಿ, ಜೇನು, ರೇಷ್ಮೆ ಸಾಕಣೆಗಳು ಮೂರು ದಿನಗಳನ್ನು ಹೊಂದಿವೆ. ಫ್ಯಾಷನ್ ಡಿಸೈನಿಂಗ್, ವಾಹನ ರಿಪೇರಿ ಮುಂತಾದವುಗಳು ಒಂದು ತಿಂಗಳ ತರಬೇತಿಯನ್ನು ಹೊಂದಿದ್ದು, ನರ್ಸಿಂಗ್, ಲೈಪ್‌ಸ್ಕಿಲ್, ಸ್ಪೋಕನ್ ಇಂಗ್ಲಿಷ್ ತರಬೇತಿಗಳು 5-6 ತಿಂಗಳು ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದವರಿಗೆ ಉದ್ಯೋಗವನ್ನು ದೊರಕಿಸಿಕೊಡಲಾಗುವುದು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿದವರಾಗಿರಬೇಕು ಎಂದರು.
ಗ್ರಾಮದ ಮುಖಂಡ ಕುಂಟೇಗೌಡ ಮಾತನಾಡಿ, ಅನೇಕ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಚಂದ್ರೇಶ್, ದೇವರಾಜು, ಪಲ್ಲವಿ ಹಾಗೂ ರುಕ್ಮಿಣಿ ಇತರರು ಇದ್ದರು.