ಮಾನವ ನಿರ್ಮಾಣವೇ ಶಿಕ್ಷಣದ ಶ್ರೇಷ್ಠ ಗುರಿ : ನಿರ್ಭಯಾನಂದ ಸ್ವಾಮೀಜಿ

Vivekananda_Vidyarthi
Published on

ತುಮಕೂರು: ಪ್ರತಿಯೊಬ್ಬ ಮನುಷ್ಯನಲ್ಲಿಯೂ ಅನಂತವಾದ ಶಕ್ತಿ ಅಡಗಿದೆ. ಚಾರಿತ್ರ್ಯ ನಿಮಾಣ, ವ್ಯಕ್ತಿತ್ವ ನಿರ್ಮಾಣಕಾರಿ ಶಿಕ್ಷಣದಿಂದ ಮಾನವ ಏನನ್ನಾದರೂ ಸಾಧಿಸುವುದಕ್ಕೆ ಸಾಧ್ಯವಿದೆ ಎಂದು ಗದಗ-ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸ್ವಾಮೀಜಿ ಹೇಳಿದರು.

ನಗರದ ರಾಮಕೃಷ್ಣ-ವಿವೇಕಾನಂದ ಆಶ್ರಮ ಹಾಗೂ ಭಾವಪ್ರಚಾರ ಪರಿಷತ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿವೇಕಾನಂದ ಜನ್ಮದಿನಾಚರಣೆ ಹಾಗೂ ರಾಜ್ಯಮಟ್ಟದ ವಿವೇಕ ವಿದ್ಯಾರ್ಥಿ-ವ್ಯಕ್ತಿತ್ವ ನಿರ್ಮಾಣಕಾರಿ ಪರೀಕ್ಷೆಯ ರ‌್ಯಾಂಕ್ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣವೆಂದರೆ ಕೇವಲ ಮಾಹಿತಿ ನೀಡುವಿಕೆಯಷ್ಟೇ ಅಲ್ಲ. ಮಾನವನಿರ್ಮಾಣವೇ ಶಿಕ್ಷಣದ ಶ್ರೇಷ್ಠ ಗುರಿ ಎಂದರು.

ಪ್ರಕೃತಿಯು ಜ್ಞಾನದ ಮೂಲ. ಜಗತ್ತಿನ ಬಹುತೇಕ ಆವಿಷ್ಕಾರಗಳಿಗೆ ಪ್ರಕೃತಿಯ ಪ್ರಚೋದನೆಯೇ ಕಾರಣ. ಪ್ರಕೃತಿ ನಿತ್ಯವೂ ಹೊಸ, ಹೊಸ ಪ್ರಯೋಗಗಳನ್ನು ಮಾಡುತ್ತದೆ. ನಮ್ಮ ದೃಷ್ಟಿಯಲ್ಲಿ ವಿಶೇಷ ಶಕ್ತಿ ಬೆಳೆಸಿಕೊಂಡಾಗ ಪ್ರಕೃತಿ ವಿಸ್ಮಯಗಳು ಕಾಣಿಸುತ್ತವೆ. ಮಾನವನಲ್ಲಿ ಅಡಗಿರುವ ಇಂತಹ ಅದ್ಭುತ ಶಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಹೊರತರುವುದೇ ಇಂದಿನ ಶಿಕ್ಷಣ ಗುರಿಯಾಗಬೇಕು. ಶಿಕ್ಷಣ ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿಯನ್ನು ಬೆಳೆಸುವುದರೊಂದಿಗೆ ಪಾವಿತ್ರೃತೆ, ಛಲ, ಸಹನೆ, ಸಾಮರ್ಥ್ಯ, ಜ್ಞಾನದಾಹ, ತತ್ವಬದ್ಧತೆ, ಪ್ರಾಮಾಣಿಕತೆ, ದೇಶ ಪ್ರೇಮಬೆಳಸಬೇಕು ಎಂದು ಸಲಹೆ ನೀಡಿದರು.

ಆಧ್ಯಾತ್ಮಿಕ ಜ್ಞಾನವೇ ಭಾರತದ ನಿಜವಾದ ಅಸ್ಮಿತೆ. ನಮ್ಮ ಇತಿಹಾಸದ ಬಗ್ಗೆ ನಮಗೇ ಅರಿವು ಇಲ್ಲದಿದ್ದರೆ ರಾಷ್ಟ್ರ ಭಕ್ತಿ ಮೂಡುವುದು ದುಸ್ಸಾಧ್ಯ ಸಮಯವೇ ಜೀವನ ಎಂಬ ಸತ್ಯವನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವುದು ಸೂಕ್ತ ಎಂದು ಬೆಂಗಳೂರಿನ ವಾಗ್ಧೇವಿ ವಿಲಾಸ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಕೆ.ಹರೀಶ್ ತಿಳಿಸಿದರು.

ಆದಿಮಾನವನಿಂದ ಆಧುನಿಕ ಮಾನವನವರೆಗೆ ಉದ್ಭವವಾದ ಜ್ಞಾನರಾಶಿಯನ್ನು ಚಿಂತಿಸಿ, ಮಥಿಸಿ ಅದನ್ನು ವರ್ತಮಾನಕ್ಕೆ ಅನ್ವಯಿಸಿ ಅದರ ಸಾರವನ್ನು ಒಗ್ಗೂಡಿಸಿ ಜಗತ್ತಿಗೆ ತಿಳಿಸಿಕೊಟ್ಟ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ನಮ್ಮ ವಿಚಾರಶಕ್ತಿ, ಇಚ್ಛಾಶಕ್ತಿಗಳನ್ನು ಊರ್ಧ್ವಮುಖಗೊಳಿಸಿಕೊಂಡಾಗ ಜೀವನ ಪರಿವರ್ತನೆಗೊಳ್ಳುತ್ತದೆ. ಶ್ರದ್ಧಾಸಕ್ತಿಗಳಿಂದ ವಿಚಾರಗಳ ಚಿಂತಮ ಮಂಥನ ನಡೆಸುವ ಕೆಲಸವನ್ನು ಇಂದಿನ ತರುಣ ಜನಾಂಗ ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಬೇಲೂರು ಮಠದ ಕೋಲ್ಕತ್ತಾದ ಟ್ರಸ್ಟಿಗಳಾದ ಸ್ವಾಮಿ ಮುಕ್ತಿನಂದಜೀ ಹೇಳಿದರು.

ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಪ್ರಾಸ್ತಾವಿಕ ಮಾತುಗಳನ್ನಾಡಿ, ರಾಜ್ಯದ ಇಪ್ಪತ್ತನಾಲ್ಕು ಜಿಲ್ಲೆಗಳಿಂದ ಒಂದು ಲಕ್ಷ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಜೀವನವನ್ನು ಕುರಿತು ಅಧ್ಯಯನ ಮಾಡಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ಭಾಗೀರಥಿ ಬಾಯಿ ನಾರಾಯಣರಾವ್ ಮಾನೆ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪ್ರೊ.ನಾರಾಯಣರಾವ್ ಆರ್.ಮಾನೆ, ್ತ ಮಾಜಿ ಶಾಸಕ ಡಿ.ಆರ್ ಪಾಟೀಲ್ ಉಪಸ್ಥಿತರಿದ್ದರು.

ಸಮಾಜ ಸೇವಕ ತುಪ್ಪಣ್ಣ ಮತ್ತು ಪ್ರಗತಿಪರ ರೈತ ರಾಮಚಂದ್ರ ಹೆಗಡೆ ಅವರನ್ನು ್ನ ಸನ್ಮಾನಿಸಲಾಯಿತು.

ರಾಜ್ಯಮಟ್ಟದ ವಿವೇಕ- ವಿದ್ಯಾರ್ಥಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವುದರ ಮೂಲಕ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net