ಬೆಂಗಳೂರು ವಕೀಲರ ಸಂಘಕ್ಕೆ ವಿವೇಕ್ ಸುಬ್ಬಾರೆಡ್ಡಿ ನೂತನ ಅಧ್ಯಕ್ಷ; 1,900ಕ್ಕೂ ಅಧಿಕ ಮತಗಳ ಅಂತರದ ಜಯ

Vivek Reddy
Published on

ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ವಕೀಲರ ಸಂಘದ (ಎಎಬಿ) ಪದಾಧಿಕಾರಿಗಳ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಹೈಕೋರ್ಟ್ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜತೆಗೆ, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಜಿ. ರವಿ ಹಾಗೂ ಖಜಾಂಚಿಯಾಗಿ ಎಂ.ಟಿ. ಹರೀಶ್ ಆಯ್ಕೆಯಾಗಿದ್ದಾರೆ.

2021ರಿಂದ 2024ರ ವರೆಗಿನ 3 ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ಸಂಘದ 16,568 ನೋದಾಯಿತ ಸದಸ್ಯರಲ್ಲಿ ಅಂದಾಜು ಹನ್ನೊಂದೂವರೆ ಸಾವಿರ ಸದಸ್ಯರು ಮತ ಚಲಾಯಿಸಿದ್ದರು. ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ನಡೆದ ಮತ ಎಣಿಕೆಯಲ್ಲಿ ಎಎಬಿ ಮಾಜಿ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಅವರ ಪುತ್ರರಾಗಿರುವ ಹಿರಿಯ ವಕೀಲ ವಿವೇಕ್ ರೆಡ್ಡಿ, ನಿಕಟ ಪೂರ್ವ ಅಧ್ಯಕ್ಷ ಎ.ಪಿ.ರಂಗನಾಥ್ ವಿರುದ್ಧ 1,900ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಚಲಾವಣೆಯಾಗಿದ್ದ ಒಟ್ಟು ಮತಗಳಲ್ಲಿ ವಿವೇಕ್ ರೆಡ್ಡಿ 4,804 ಮತಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರೆ, ಎ.ಪಿ.ರಂಗನಾಥ್ 2,894 ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. 2,545 ಮತಗಳೊಂದಿಗೆ ವಕೀಲ ಆರ್. ರಾಜಣ್ಣ ಮೂರನೇ ಸ್ಥಾನ ಪಡೆದರೆ, ಮಾಜಿ ಅಧ್ಯಕ್ಷರೂ ಆದ ಎಚ್.ಸಿ. ಶಿವರಾಮ್ 876 ಮತಗಳನ್ನು ಪಡೆದಿದ್ದಾರೆ.

ಟಿ.ಜಿ. ರವಿ ಪ್ರಧಾನ ಕಾರ್ಯದರ್ಶಿ: ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಟಿ.ಜಿ. ರವಿ 3,030 ಮತಗಳನ್ನು ಪಡೆದಿದ್ದು, ಪ್ರತಿಸ್ಪರ್ಧಿ ಎಚ್. ವಿ. ಪ್ರವೀಣ್ ಗೌಡ (2,534 ಮತಗೂ) ವಿರುದ್ಧ 496 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2,263 ಮತಗಳನ್ನುಪಡೆದ ವಕೀಲ ಶಿವಮೂರ್ತಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಮತ್ತೊಂದೆಡೆ, ಎಚ್.ಎಂ. ಹರೀಶ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸದಸ್ಯರ ಆಯ್ಕೆ: ಇದಲ್ಲದೆ, ಹೈಕೋರ್ಟ್​ನ 7, ಮ್ಯಾಜಿಸ್ಟ್ರೇಟ್ ಕೊರ್ಟ್​ನ 5, ಸಿಟಿ ಸಿವಿಲ್ ಕೋರ್ಟ್​ನ 12, ಮೇಯೊ ಹಾಲ್ ಕೋರ್ಟ್​ನ 5 ಸೇರಿ ಒಟ್ಟು 29 ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಗಳಿಗೂ ಚುನಾವಣೆ ನಡೆದು, ಸದಸ್ಯರು ಆಯ್ಕೆಯಾಗಿದ್ದಾರೆ.

ಹಿರಿಯ ವಕೀಲ ಕೆ.ಎನ್. ಫಣೀಂದ್ರ ಮುಖ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರೆ, ಉನ್ನತಾಧಿಕಾರ ಸಮಿತಿಯ ಅಧ್ಯಕ್ಷ ಎನ್.ಎಸ್.ಸತ್ಯನಾರಾಯಣ, ಕೆ.ಎನ್.ಪುಟ್ಟೇಗೌಡ, ಟಿ.ಎನ್.ಶಿವಾರೆಡ್ಡಿ, ಎಂ.ಆರ್. ವೇಣುಗೋಪಾಲ, ಜಿ.ಚಂದ್ರಶೇಖರಯ್ಯ, ಎ.ಜಿ.ಶಿವಣ್ಣ, ಎಸ್.ಎನ್. ಪ್ರಶಾಂತಚಂದ್ರ ಹಾಗೂ ಪಿ.ಅನುಚೆಂಗಪ್ಪ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದರು. ಚುನಾವಣೆಯಲ್ಲಿ ಇವಿಎಂಗಳ ಮೂಲಕ ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net