

ಕೊಳ್ಳೇಗಾಲ: ಪಟ್ಟಣದಲ್ಲಿ ಪ್ರಸನ್ನ ಶ್ರೀ ವಿಶಾಲಾಕ್ಷೀ ಸಮೇತ ಶ್ರೀ ವಿಶ್ವನಾಥಸ್ವಾಮಿ ದಿವ್ಯ ಬ್ರಹ್ಮರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.
ಬಂಗಾರ ಶೆಟ್ಟರ ವಿಶ್ವನಾಥಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಶಿವಯಾಗ ಪೂಜಾರಾಧನೆ, ಬಲಿ ಪ್ರಧಾನ ಮಾಡಿ, ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಲಾಯಿತು. ಬಳಿಕ ಅಗ್ರಹಾರ ಬೀದಿಯಲ್ಲಿ ಮಂಟಪೋತ್ಸವ ನಡೆಸಲಾಯಿತು. ಅಲಂಕೃತಗೊಳಿಸಿದ್ದ ರಥದ ಸುತ್ತ ಪ್ರದಕ್ಷಿಣೆ ಹಾಕಿ ರಥದ ಮೇಲೆ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ಬಳಿಕ ರಥದ ಬೀದಿಗಳಲ್ಲಿ ರಥೋತ್ಸವ ನಡೆಸಿದರು. ತಾಲೂಕು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತ ಸಮೂಹ ರಥವನ್ನು ಶ್ರದ್ಧಾ-ಭಕ್ತಿಯಿಂದ ಎಳೆದು ಭಕ್ತಿ ಮೆರೆದರು.
ದೇವಸ್ಥಾನವನ್ನು ಹಸಿರು ತೋರಣ, ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. ವಿದ್ಯುತ್ ದೀಪಾಲಂಕರ ಆಕರ್ಷಣೀಯವಾಗಿತ್ತು. ದೇವಾಲಯದ ಎಲ್ಲ ಪೂಜಾ ಕೈಂಕರ್ಯವನ್ನು ಪ್ರಧಾನ ಅರ್ಚಕ ಜ್ಯೋತಿಷಿ ಕೃಷ್ಣಕುಮಾರ ಶರ್ಮ ನೆರವೇರಿಸಿದರು. ಬಂಗಾರ ಶೆಟ್ಟರ ದೇವಸ್ಥಾನ ಟ್ರಸ್ಟಿಗಳಾದ ಡಾ.ಸಿ. ಪರಮೇಶ್ವರಯ್ಯ, ಕೆ.ವೇಣುಗೋಪಾಲ, ಎ.ಸಿ.ಚಂದ್ರ ಶೇಖರ್, ವಕೀಲ ಎಲ್.ಮಹದೇವಯ್ಯ, ಬಿ.ಎಸ್. ಗಣೇಶ್ ಕುಮಾರ್, ಮ್ಯಾನೇಜಿಂಗ್ ಟ್ರಸ್ಟಿ ಆರ್. ನಾಗಪ್ರಕಾಶ್, ಎ.ಪಿ.ಸತೀಶ್ ಕುಮಾರ್, ಮ್ಯಾನೇಜರ್ ಎ.ಪಿ.ಚೆನ್ನವೀರಶೆಟ್ಟಿ ಮತ್ತಿತರಿದ್ದರು.