

ಹೊಳೆನರಸೀಪುರ: ಪೋಲಿಸ್ ಭದ್ರತೆಯಲ್ಲಿ ಉಲಿವಾಲ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದವರು ಭಾನುವಾರ ಕಲ್ಲೇಶ್ವರನ ದರ್ಶನ ಮಾಡಿದರು.
ದೇವಾಲಯ ಪ್ರವೇಶದ ಮೂಲಕ ಗ್ರಾಮದ ಸವರ್ಣಿಯರು ಹಾಗೂ ಪರಿಶಿಷ್ಟ ಜಾತಿ ಜನಾಂಗದವರ ನಡುವೆ ಇದ್ದ ಅಸ್ಪೃಶ್ಯತೆ ತೊಲಗಿ, ಸಂವಿಧಾನಕ್ಕೆ ಜೈಕಾರ ಮೊಳಗಿಸಲಾಯಿತು.
ತಾಲೂಕಿನ ಕಸಬಾ ಹೋಬಳಿಯ ಉಲಿವಾಲ ಗ್ರಾಮದಲ್ಲಿ ಸವರ್ಣಿಯರು ಹಾಗೂ ಪರಿಶಿಷ್ಟ ಜಾತಿಯವರ ನಡುವೆ ಗ್ರಾಮ ದೇವರಾದ ಕಲ್ಲೇಶ್ವರನ ದೇವಾಲಯ ಪ್ರವೇಶ ಸಂಬಂಧಿಸಿದಂತೆ ಜಟಾಪಟಿ ನಡೆದಿತ್ತು. ಸವರ್ಣಿಯರು ದೇವಾಲಯ ಪ್ರವೇಶ ಮಾಡಿ ದರ್ಶನ ಮಾಡಿದರೆ, ಪರಿಶಿಷ್ಟ ಜಾತಿಯವರಿಗೆ ಪ್ರವೇಶ ಇರಲಿಲ್ಲ. ಗ್ರಾಮದ ಪರಿಶಿಷ್ಟ ಜಾತಿ ಯುವಕರ ಮನವಿಯ ಮೇರೆಗೆ ತಾಲೂಕು ಆಡಳಿತ ಯುಗಾದಿ ಹಬ್ಬದ ದಿನದಂದು ಗ್ರಾಮದ ಎಲ್ಲರೂ ಜಾತ್ಯತೀತವಾಗಿ ದೇವಾಲಯ ಪ್ರವೇಶ ಮಾಡಿ ದೇವರ ದರ್ಶನ ಮಾಡಲು ಅವಕಾಶ ಕಲ್ಪಿಸಿ ವೈಶಮ್ಯಕ್ಕೆ ತೆರೆ ಎಳೆಯಿತು.
ಧಾರ್ಮಿಕ ದತ್ತಿ ಇಲಾಖೆಯ ನಿರ್ವಹಣೆಯಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರುತ್ತಿರುವ ಉಲಿವಾಲ ಗ್ರಾಮದ ಕಲ್ಲೇಶ್ವರನ ದೇವಾಲಯ ಪ್ರವೇಶವನ್ನು ಪರಿಶಿಷ್ಟ ಜಾತಿ ಸಮುದಾಯದವರಿಗೆ ಅವಕಾಶ ನೀಡಿರುವುದರಿಂದ ಪ್ರಕರಣ ಸುಖಾಂತ್ಯಗೊಂಡಿದೆ. ಉಲಿವಾಲ ಗ್ರಾಮದಲ್ಲಿ ಚೋಳರ ಕಾಲದಲ್ಲಿ ನಿರ್ಮಿತವಾದಂತಹ ದೇವಸ್ಥಾನಕ್ಕೆ ಪರಿಶಿಷ್ಟ ಜಾತಿ ಜನಾಂಗದವರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಈ ಗ್ರಾಮ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಪರಿಶಿಷ್ಟ ಜಾತಿ ಜನಾಂಗದವರಿಗೆ ಪ್ರವೇಶ ಇರಲಿಲ್ಲ. ಜತೆಗೆ ದೇವಸ್ಥಾನ ಜೀರ್ಣೋದ್ಧಾರವಾಗಿ 50 ವರ್ಷಗಳು ಕಳೆದರೂ ಇಂದಿಗೂ ಕೂಡ ಪ್ರವೇಶ ನೀಡಲಾಗಿರಲಿಲ್ಲ. ಹಬ್ಬ ಹರಿದಿನಗಳಲ್ಲಿ ದೇವರ ಉತ್ಸವಗಳಲ್ಲಿ ದೇವಾಲಯದ ಹೊರಗಡೆ ನಿಂತು ಪರಿಶಿಷ್ಟ ಜಾತಿ ಜನರು ಭಗವಂತನಿಗೆ ಭಕ್ತಿ ಸಮರ್ಪಿಸುತ್ತಿದ್ದರು. ಸವರ್ಣಿಯರು ದೇವಾಲಯದೊಳಗೆ ಪೂಜೆ ನೆರವೇರಿಸಿದರೆ, ಪರಿಶಿಷ್ಟ ಜಾತಿ ಜನರು ಮಹಿಳೆಯರು ದೇವಾಲಯದ ಹೊರಗಡೆ ನಿಂತು ಪೂಜೆ ಸಲ್ಲಿಸುತ್ತಿದ್ದ ಸಂಪ್ರದಾಯ ಮುಂದುವರೆದಿತ್ತು. ಮಾರ್ಚ್ 27ರ ದಿನದಂದು ತಹಸೀಲ್ದಾರ್ ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಪ್ರಮುಖರ ನಡುವೆ ಚರ್ಚೆ ನಡೆಸಿ ಸಂಧಾನ ಮಾಡುವ ಮೂಲಕ ಯಶಸ್ವಿಯಾದರು. ಗ್ರಾಮದ ಪರಿಶಿಷ್ಟ ಜಾತಿ ಜನರು ಜಾತ್ಯತೀತವಾಗಿ ಕಲ್ಲೇಶ್ವರನ ದರ್ಶನ ಪಡೆಯಲು ಸವರ್ಣಿಯರು ಸಹಕರಿಸಿ ಯುಗಾದಿ ಹಬ್ಬದಂದೇ ದೇವಾಲಯ ಪ್ರವೇಶ ಮಾಡಲು ಅವಕಾಶ ಮಾಡಿಕೊಡಲಾಯಿತು.
ಗ್ರಾಮದ ಯಜಮಾನರಾದ ನಾಗರಾಜೇಗೌಡ, ಪುಟ್ಟಸ್ವಾಮಿಗೌಡ, ರಾಮೇಗೌಡ, ನಂಜುಂಡಯ್ಯ, ಚನ್ನೇಗೌಡ, ದೇವರಾಜೇಗೌಡ, ಅಶೋಕ, ನವೀನ, ಗಿಡ್ಡಯ್ಯ, ಮಂಜು, ಕುಮಾರ, ನಾಗರಾಜು, ಅರುಣ, ಮಧು ಗ್ರಾಮಸ್ಥರು ಇದ್ದರು.