ಹಿಂದುಗಳ ಧಾರ್ಮಿಕ ರಾಜಧಾನಿ ಕಾಶಿಯಲ್ಲಿರುವ ವಿಶ್ವನಾಥ ಜ್ಯೋತಿರ್ಲಿಂಗ

Kashi
Published on

ಪ್ರಶಾಂತ ರಿಪ್ಪನ್‌ಪೇಟೆ, ಬೆಂಗಳೂರು : ‘‘ಸೌರಾಷ್ಟ್ರೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನಮ್, ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್, ಪರ್ಲ್ಯಾಂ ವೈದ್ಯನಾಥಂಚ ಢಾಕಿನ್ಯಾಂ ಭೀಮ ಶಂಕರಮ್,

ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ, ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ, ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ.

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ, ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ.’

ಸಪ್ತ ಜನ್ಮಗಳ ಪಾಪಗಳನ್ನು ನಾಶ ಮಾಡುವ ಶಕ್ತಿ ಇರುವ ದ್ವಾದಶ ಜ್ಯೋತಿರ್ಲಿಂಗಗಳು ಭಾರತದ ಧಾರ್ಮಿಕ ಸಂಸ್ಕೃತಿಯ ಹೆಗ್ಗುರುತುಗಳು. ಜಾತಿ, ಮತ, ಭಾಷೆ, ಪ್ರದೇಶ ಎಂಬ ಎಲ್ಲ ಭೇದಗಳನ್ನು ಬದಿಗೊತ್ತಿ ಸರ್ವರಲ್ಲಿ ಸಾಮರಸ್ಯ ಮತ್ತು ಸಮನ್ವಯವನ್ನು ಸಾಧಿಸುವಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಮಹಾ ಶಿವರಾತ್ರಿಯ ಪರ್ವಕಾಲದಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂಬತ್ತನೆಯದಾದ ಶ್ರೀ ಕಾಶಿ ವಿಶ್ವನಾಥ ಕ್ಷೇತ್ರದ ಕುರಿತು ಒಂದು ಸಂಕ್ಷಿಪ್ತ ಚಿತ್ರಣ ಇಲ್ಲಿದೆ ನೋಡಿ.

ಹಿಂದುಗಳ ಪಾಲಿನ ಧಾರ್ಮಿಕ ರಾಜಧಾನಿ ಎಂದೇ ಪ್ರಸಿದ್ಧವಾಗಿರುವ ಕಾಶಿಯಲ್ಲಿ ವಿಶ್ವನಾಥ ಜ್ಯೋತಿರ್ಲಿಂಗವು ವಿರಾಜಮಾನವಾಗಿದೆ. ರಾಜ ದಿಯೋದಾಸನ ಭಕ್ತಿಗೆ ಮೆಚ್ಚಿ ಕಾಶಿಗೆ ಆಗಮಿಸಿದ ಭಗವಂತನು ಮರಳಿ ಕೈಲಾಸಕ್ಕೆ ಹೋಗಿಲ್ಲ ಎಂಬ ಕಾರಣಕ್ಕೆ ಕಾಶಿಯನ್ನು ಭೂಕೈಲಾಸ ಎನ್ನಲಾಗುತ್ತದೆ. ಹಿಂದುಗಳು ಜೀವನದಲ್ಲಿ ಒಮ್ಮೆಯಾದರೂ ಕಾಶೀಯಾತ್ರೆ ಕೈಗೊಳ್ಳಬೇಕೆಂಬ ನಿಯಮವಿದೆ. ಪವಿತ್ರ ದೇವನದಿ ಗಂಗೆಯು ಇಲ್ಲಿ ಉತ್ತರವಾಹಿನಿಯಾಗಿ ಹರಿಯುತ್ತಿದ್ದು ವರುಣ ಮತ್ತು ಅಸ್ಸಿ ನದಿಗಳ ನಡುವಿನ ವಾರಾಣಸಿ ನಗರವು ನೈಸರ್ಗಿಕ ವಾಸ್ತು ಶ್ರೀಮಂತಿಕೆಯಿಂದ ಕೂಡಿದೆ.

ಕಾಶೀ ಪಟ್ಟಣದಲ್ಲಿ 1500ಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳು, 300ಕ್ಕೂ ಹೆಚ್ಚಿನ ಮಠ-ಪೀಠ-ಆಶ್ರಮಗಳಿದ್ದು, ಅವುಗಳಲ್ಲಿ ವಿಶ್ವನಾಥ ಮಂದಿರ ಮತ್ತು ಜಗದ್ಗುರು ವಿಶ್ವಾರಾಧ್ಯ ಜಂಗಮವಾಡಿ ಮಠ ಅತ್ಯಂತ ಪ್ರಾಚೀನವಾದವುಗಳು ಎಂದು ಇತಿಹಾಸಕಾರರು ಗುರುತಿಸಿದ್ದಾರೆ.

ವಿಶ್ವನಾಥ ಮಂದಿರವು ಹಲವು ಬಾರಿ ಪರಮತಾವಲಂಬಿಗಳ ದಾಳಿಗೆ ತುತ್ತಾಗಿದೆಯಾದರೂ ಮತ್ತೆ ಮತ್ತೆ ಪುನರ್ ಜೀರ್ಣೋದ್ಧಾರಗೊಂಡಿದೆ. ಈಗಿರುವ ಮಂದಿರವು ಅಹಲ್ಯಬಾಯಿ ಹೋಲ್ಕರ್ ನಿರ್ಮಾಣ ಮಾಡಿದ್ದು, ಇತ್ತೀಚೆಗೆ ಸರ್ಕಾರ ವಿಶ್ವನಾಥ ಕಾರಿಡಾರ್‌ನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಿದೆ. ವಾರಾಣಸಿಗೆ ನೇರ ವಿಮಾನ, ರೈಲು ಹಾಗೂ ವಾಹನ ಸೌಕರ್ಯಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net